ಕಡೂರಿನ ತಾಪಂ ಸಭಾಂಗಣದಲ್ಲಿ ಬಿಎಲ್‌ಒಗಳಿಗೆ ಎಸ್‌ಐಆರ್ ಪ್ರಕ್ರಿಯೆ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿದರು.  
ಚಿಕ್ಕಮಗಳೂರು

ಕಡೂರಲ್ಲಿ 303 ಬಿಎಲ್‌ಒಗಳಿಂದ ಮ್ಯಾಪಿಂಗ್ ಕಾರ್ಯ

ಜಿ.ಹೆಚ್. ಧನ್ಯಕುಮಾರ್
ಕಡೂರು: ಚುನಾವಣಾ ಆಯೋಗದ ಆದೇಶದಂತೆ ಜೂ. 20 ರಿಂದ ಅಗಸ್ಟ್ 7ವರೆಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆಯಲಿದ್ದು, ತಾಲೂಕಿನ 303 ಜನ ಬಿಎಲ್‌ಒಗಳು ಮತದಾರರ ಮನೆಗೆ ಭೇಟಿ ನೀಡಿ ಅರ್ಜಿ ಕೊಟ್ಟು ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ತಿಳಿಸಿದರು.
ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿ, 2026ರ ಮತದಾರರ ಪಟ್ಟಿಯಲ್ಲಿ ಇರುವ ಮತದಾರರ ವಿಳಾಸಕ್ಕೆ ಬಿಎಲ್‌ಒಗಳು ಆಯಾ ಮತದಾರರ ಮಾಹಿತಿ ಇರುವ ಅರ್ಜಿಯನ್ನು ಮನೆಗೆ ಬಂದು ಕೊಡಲಿದ್ದಾರೆ. ಈಗಾಗಲೇ ಸಖರಾಯಪಟ್ಟಣ ಹೋಬಳಿ ಒಳಗೊಂಡ ತಾಲೂಕಿನಲ್ಲಿನ ಒಟ್ಟು 2,51,728 ಮತದಾರರಲ್ಲಿ 2,42,220 ಮತದಾರರ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ ಎಂದರು.
ಜಿಲ್ಲೆಯ ಅತಿದೊಡ್ಡ ತಾಲೂಕು ಕೇಂದ್ರವಾದ ಕಡೂರಲ್ಲಿ ಶೇ.96.48 ರಷ್ಟು ಪ್ರಕ್ರಿಯೆ ಮುಗಿದಿದೆ. ಬಿಎಲ್‌ಒಗಳು ಕೊಡುವ ಅರ್ಜಿ ಭರ್ತಿ ಮಾಡಿ ಭಾವಚಿತ್ರ ೆಟೊ ನೀಡಿದರೆ ಅವರಿಗೆ ಇತ್ತೀಚಿನ ೆಟೊದೊಂದಿಗೆ ಹೊಸ ಮತದಾರರ ಗುರುತಿನ ಚೀಟಿ ದೊರಕಲಿದೆ ಎಂದರು.
ತಾಲೂಕಿನಲ್ಲಿ ಜೂ.30ರಿಂದ ಜು.29ರವರೆಗೆ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಲಿದ್ದು, ಆಗಸ್ಟ್ 5 ಕರಡು ಮತದಾರರ ಪಟ್ಟಿ ಪ್ರಕಟಣೆಗೊಳ್ಳಲಿದೆ. ಆಗಸ್ಟ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ಒಬ್ಬರ ಹೆಸರಿನಲ್ಲಿ 2-3 ನಕಲಿ ಮತದಾರರ ಚೀಟಿಗಳು, ಮೃತ ಮತದಾರರ ಹೆಸರು ಅಳಿಸದಿರುವುದು. ಇವುಗಳನ್ನು ಪತ್ತೆ ಮಾಡಿ ಅಳಿಸಲು ಎಸ್‌ಐಆರ್ ಸಹಕಾರಿಯಾಗಲಿದೆ. ಬಿಎಲ್‌ಒಗಳು ಕೊಡುವ ಅರ್ಜಿಯನ್ನು ಕುಟುಂಬದ 18 ವರ್ಷ ತುಂಬಿದ ಯಾವುದೇ ಸದಸ್ಯರು ಭರ್ತಿ ಮಾಡಿ ನೀಡಬಹುದು. ಹಳೆ ಮತದಾರರ ಚೀಟಿಯಲ್ಲಿ ಇರುವ ಮಾಹಿತಿಯನ್ನು ಅರ್ಜಿಯಲ್ಲಿ ತುಂಬ ಬೇಕು. ಹೆಸರು, ವಿಳಾಸ ಬದಲಾವಣೆ ಇದ್ದರೆ ಬೇರೆ ಅರ್ಜಿ ಭರ್ತಿ ಮಾಡಿ ನೀಡಬಹುದಾಗಿದೆ ಎಂದರು.