ಬ್ಲಾೃಕ್ ಮೇಲ್ ಮಾಡಿದವರು ಅರೆಸ್ಟ್
- ಎಐನಿಂದ ವಿಡಿಯೋ ತಯಾರಿಸಿದ ಆರೋಪಿಗಳು
- ತಿಂಗಳ ಹಿಂದೆಯೂ ಮಹಿಳೆಗೆ ಇಂಥದ್ದೇ ಕೃತ್ಯ
ತರೀಕೆರೆ: ಬಾವಿಕೆರೆ ಗ್ರಾಮದಲ್ಲಿ ಯುವತಿಯ ಫೋಟೋವನ್ನು ಎಐ ಮೂಲಕ ಅಶ್ಲೀಲವಾಗಿ ವಿಡಿಯೋ ಚಿತ್ರಿಸಿ ಯುವತಿಯ ತಾಯಿಯ ಮೊಬೈಲ್‌ಗೆ ರವಾನಿಸುವ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳನ್ನು ಲಕ್ಕವಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಾವಿಕೆರೆ ಗ್ರಾಮದ ಸಾಹುಲ್ (20) ಮತ್ತು ಅಕ್ಷಯ್ (20) ಬಂಧಿತ ಆರೋಪಿಗಳು. ಇತ್ತೀಚೆಗೆ ಬಾವಿಕೆರೆ ಗ್ರಾಮದ ಯುವತಿ ಜನ್ಮದಿನಾಚರಿಸಿದ ಫೋಟೊಗಳನ್ನು ಮೊಬೈಲ್ ಸ್ಟೇಟಸ್‌ನಲ್ಲಿ ಅಪ್‌ಲೋಡ್ ಮಾಡಿಕೊಂಡಿದ್ದಳು. ಸ್ಟೇಟಸ್‌ನಿಂದ ಫೋಟೋ ಡೌನ್ ಮಾಡಿಕೊಂಡ ಆರೋಪಿಗಳು ಫೋಟೋಗಳನ್ನು ಎಐ ಮೂಲಕ ಅಶ್ಲೀಲ ವಿಡಿಯೋವನ್ನಾಗಿ ಪರಿರ್ವತಿಸಿ, ಆ ವಿಡಿಯೋವನ್ನು ಯುವತಿಯ ತಾಯಿ ಮೊಬೈಲ್‌ಗೆ ರವಾನಿಸಿ ಹಣದ ಬೇಡಿಕೆ ಇಟ್ಟಿದ್ದರು.
ಆರೋಪಿಗಳಾದ ಸಾಹುಲ್, ಅಕ್ಷಯ್, ಯೋಗೀಶ್ ಎಂಬ ಹೆಸರಿನಲ್ಲಿ ಯುವತಿಯ ತಾಯಿಗೆ ಕರೆ ಮಾಡಿ ಕೇಳಿದಷ್ಟು ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಮಗಳ ಅಶ್ಲೀಲ ವಿಡಿಯೋ ಹರಿಯ ಬಿಡುವುದಾಗಿ ಬ್ಲಾೃಕ್‌ಮೇಲ್ ಮಾಡಿದ್ದರು. ಯುವತಿಯ ತಾಯಿ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪೊಲೀಸರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಎಐ ಮೂಲಕ ಯುವತಿಯ ಅಶ್ಲೀಲ ವಿಡಿಯೋ ಸೃಷ್ಟಿಸಿದ ಇಬ್ಬರು ಆರೋಪಿಗಳು ಮೇನಲ್ಲಿ ಬಾವಿಕೆರೆ ಗ್ರಾಮದ ವಿವಾಹಿತ ಮಹಿಳೆಯೊಬ್ಬರ ಚಿತ್ರವನ್ನು ಎಐ ಮೂಲಕ ಅಶ್ಲೀಲ ವಿಡಿಯೋವಾಗಿ ಸಷ್ಟಿಸಿ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಪ್ರಕರಣಕ್ಕೆ ಸಂಬಧಿಸಿದ ದೂರು ಸಹ ಸಿಸಿಬಿ ಪೊಲೀಸರಿಗೆ ಸಲ್ಲಿಕೆಯಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.