ಶಂಗೇರಿ ಶ್ರೀ ಶಾರದಾ ದೇವಾಲಯ.
ಶೃಂಗೇರಿ: ನಾಲ್ಕೂ ದಿಕ್ಕುಗಳಲ್ಲಿ ಅರಣ್ಯ ಪ್ರದೇಶ, ಗಿರಿಗಳು ಜತೆಗೆ ಶುದ್ಧ ಸ್ಫಟಿಕದಂತಹ ಜಲವುಳ್ಳ ತುಂಗಾ ನದಿ ತೀರದಲ್ಲಿ ಪುಣ್ಯಕ್ಷೇತ್ರ ಶೃಂಗೇರಿ ಜಗತ್ಪ್ರಸಿದ್ಧಿ ಪಡೆದಿದೆ. ತುಂಗಾ ದಡದ ವಿಶಾಲ ಬಂಡೆ ಮೇಲೆ ಶ್ರೀಚಕ್ರ ಕೆತ್ತಿ ಶ್ರೀಗಂಧದ ಶಾರದಾಮೂರ್ತಿಯನ್ನು ಶ್ರೀ ಆದಿಶಂಕರರು ಪ್ರತಿಷ್ಠಾಪಿಸಿದ್ದರು. ಶೃಂಗೇರಿ ಶ್ರೀ ಶಾರದಾ ಪೀಠದ 33ನೇ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮೀಜಿ ಅವರು ಶಿಲಾಮಯ ದೇಗುಲಕ್ಕೆ ಚಾಲನೆ ನೀಡಿದರು. ಬಳಿಕ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ 1916ರಲ್ಲಿ ಶ್ರೀ ಶಾರದಾ ದೇವಾಲಯದ ಕುಂಭಾಭಿಷೇಕ ನೆರವೇರಿಸಿದರು.
ಶ್ರೀ ಶಾರದಾ ದೇವಾಲಯದ ಬಳಿಕ ಶ್ರೀ ವಿದ್ಯಾಶಂಕರ ದೇವಾಲಯ ಅತ್ಯಂತ ಪ್ರಮುಖ. ಶಿಲೆಯಿಂದ ನಿರ್ಮಾಣಗೊಂಡ ದೇವಾಲಯದ ಹೊರ ಹಾಗೂ ಒಳಪ್ರಾಂಗಣದ ಶಿಲ್ಪಕಲೆ ಹೊಯ್ಸಳ ಹಾಗೂ ದ್ರಾವಿಡ ಶಿಲ್ಪಶಾಸ್ತ್ರಗಳಿಂದ ಸಂಯೋಜಿಸಲ್ಪಟ್ಟಿದೆ. ಕ್ರಿ.ಶ. 1338ರಲ್ಲಿ ಸ್ಥಾಪಿತಗೊಂಡ ದೇವಸ್ಥಾನದ ಶಿಲ್ಪಕಲೆ ಜಗತ್ತಿನ ಅದ್ಭುತ ಕಲಾಪ್ರಕಾರಗಳನ್ನು ತೆರೆದಿಡುವಲ್ಲಿ ಯಶಸ್ವಿಯಾಗಿದೆ. ಶೃಂಗೇರಿ ಮಧ್ಯಭಾಗದಲ್ಲಿರುವ ಶ್ರೀ ಮಲಹಾನೀಕರೇಶ್ವರ, ವಿದ್ಯಾರಣ್ಯಪುರದ ಶ್ರೀ ಚತುರ್ಮಾರ್ತಿ ವಿದ್ಯೇಶ್ವರ, ಶ್ರೀ ರಾಮದೇವಸ್ಥಾನ, ಶಂಕರಗಿರಿ, ಕಿಗ್ಗಾದ ಮಳೆದೇವರು ಖ್ಯಾತಿಯ ವಿಜಯನಗರ ಕಾಲದಲ್ಲಿ ನಿರ್ಮಿತಗೊಂಡ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಸ್ಥಾನ, ಜೈನಬಸದಿ ಜತೆ ಹೆಬ್ಬಾಗಿಲು ವೆಂಕಟರಮಣಸ್ವಾಮಿ ಹೀಗೆ ತಾಲೂಕಿನಲ್ಲಿ ನೂರಾರು ಪ್ರಸಿದ್ಧ ದೇವಾಲಯಗಳು ಇವೆ.
ಶೃಂಗೇರಿ ಶಾರದಾ ಪೀಠದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ವಸತಿಗೃಹಗಳು, ನೀರಿನ ವ್ಯವಸ್ಥೆ, ಪ್ರವಾಸಿಗರಿಗೆ ಶಾರದಾ ಪ್ರಸಾದವಿದ್ದು, ಮೂಲಸೌಕರ್ಯಗಳಿಗೆ ಆದ್ಯತೆ ನೀಡಿದೆ. ಕಿಗ್ಗಾ ದೇವಸ್ಥಾನದಲ್ಲಿ ಯಾತ್ರಿನಿವಾಸ ಸರ್ಕಾರದಿಂದ ನಿರ್ಮಿಸಲ್ಪಟ್ಟಿದೆ. ಇನ್ನು ಕಣ್ಮನ ತಣಿಸುವ ಸಿರಿಮನೆ ಜಲಪಾತ ಕಿಗ್ಗಾದಿಂದ ಐದು ಕಿ.ಮೀ ದೂರದಲ್ಲಿದೆ.
ಶ್ರೀ ತೋರಣ ಗಣಪತಿ ದೇವಸ್ಥಾನ
ದ್ವಾರದ ಮೇಲ್ಭಾಗದಲ್ಲಿ ಗಣಪತಿ ಇರುವುದರಿಂದ ತೋರಣಗಣಪತಿ ಎಂದು ಕರೆಯಲಾಗುತ್ತಿದೆ. ಶೃಂಗೇರಿ ಶ್ರೀಮಠದ 32ನೇ ಅಧಿಪತಿಯಾದ ಶ್ರೀ ನರಸಿಂಹಭಾರತೀ ಸ್ವಾಮೀಜಿ ಇಲ್ಲಿಯೇ ಅನುಷ್ಠಾನ ಪೂಜೆ ನೆರವೇರಿಸುತ್ತಿದ್ದರು. ಗಣಪತಿ ಸಕಲ ಇಷ್ಟಾರ್ಥ ನೆರವೇರಿಸುವ ದೃಢವಿಶ್ವಾಸ ವಿವಿಧ ಪ್ರಾಂತ್ಯಗಳಿಂದ ಬರುವ ಭಕ್ತರ ದೃಢವಾದ ನಂಬಿಕೆ. ಹಾಗಾಗಿ ದೇವಾಲಯದ ಮೋದಕ ಸೇವೆ ಜತೆ ಇಷ್ಟಾರ್ಥ ನೆರವೇರಲು 11, 21, 108 ಹಾಗೂ 1008 ತೆಂಗಿನಕಾಯಿ ಒಡೆಸುವ ಹರಕೆ ಹೊತ್ತು ಬಳಿಕ ಅದನ್ನು ನೆರವೇರಿಸುವ ಭಕ್ತ ಸಮೂಹವಿದೆ.
ಶ್ರೀ ಮಲಹಾನಿಕರೇಶ್ವರ ದೇವಾಲಯ
ಕಶ್ಯಪ ಪ್ರಜಾಪತಿಯ ಶ್ರೀ ವಿಭಾಂಡಕ ಮಹರ್ಷಿಗಳು ಈ ಬೆಟ್ಟದಲ್ಲಿ ತಪಸ್ಸು ಮಾಡುತ್ತಿದ್ದರು. ಅಲ್ಲಿದ್ದ ಶಿವಲಿಂಗವನ್ನು ನಿರಂತರ ಆರಾಧಿಸುತ್ತಿದ್ದರು. ಕೊನೆಗೆ ಆ ಲಿಂಗದಲ್ಲೇ ಲೀನರಾದರು. ಪಟ್ಟಣದ ಮಧ್ಯಭಾಗದಲ್ಲಿ ಇರುವ ಆ ಲಿಂಗವನ್ನು ಶ್ರೀ ಮಲಹಾನಿಕರೇಶ್ವರ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಶ್ರೀ ಶಾರದಾ ಪೀಠದಲ್ಲಿ ಹಲವಾರು ದೇವಾಲಯಗಳು, ಗುರು ನಿವಾಸದಲ್ಲಿ ಶ್ರೀ ಚಂದ್ರಮೌಳೀಶ್ವರ, ರತ್ನಗಣಪತಿ ಹೀಗೆ ನೂರಾರು ದೇವಾಲಯಗಳಿದ್ದು ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಸಾಕ್ಷಾತ್ಕರಿಸುತ್ತಿವೆ. ಶೃಂಗೇರಿ ಶಾರದಾ ಪೀಠದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ವಸತಿ ಗೃಹಗಳು, ನೀರಿನ ವ್ಯವಸ್ಥೆ ಬಂದ ಪ್ರವಾಸಿಗರಿಗೆ ಶಾರದಾ ಪ್ರಸಾದವಿದ್ದು ಮೂಲ ಸೌಕರ್ಯಗಳಿಗೆ ಹೆಚ್ಚು ಆದ್ಯತೆ ನೀಡಿದೆ.
ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಎರಡು ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಶಂಕರಗಿರಿ ಬೆಟ್ಟ ಪ್ರವಾಸಿಗರ ಗಮನಸೆಳೆಯುತ್ತಿದೆ. ಪ್ರಾಕೃತಿಕ ಸೌಂದರ್ಯದ ನಡುವೆ ಕಂಗೊಳಿಸುವ 32 ಅಡಿ ಎತ್ತರದ ಶ್ರೀ ಶಂಕರಾಚಾರ್ಯರ ಮೂರ್ತಿ, ಎಕ್ಸಲೇಟರ್ ವ್ಯವಸ್ಥೆ, ಭಕ್ತಿ ಸಂಗೀತದ ಮ್ಯೂಸಿಕಲ್ ೌಂಟೇನ್, ಸುರೇಶ್ವರಾಚಾರ್ಯ, ಶ್ರೀ ಶಂಕರರ ನಾಲ್ಕು ಶಿಷ್ಯರ ಪ್ರತಿಮೆಗಳು, ಆಂಜನೇಯ, ಗಣಪತಿ ವಿಗ್ರಹಗಳು ಇನ್ನೊಮ್ಮೆ ನೋಡಬೇಕು ಅನ್ನಿಸುತ್ತವೆ. ಶಂಕರಗಿರಿ ಬೆಟ್ಟದಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಬೆಟ್ಟದ ಕೆಳಗಡೆ ವಸತಿಸೌಲಭ್ಯ ಹಾಗೂ ತಿಂಡಿ ತಿನಿಸುಗಳ ವ್ಯವಸ್ಥೆ ಇರುವ ಹೋಟೆಲ್ ಇದೆ.
ಶ್ರೀ ದುರ್ಗಾದೇವಸ್ಥಾನ
ಶ್ರೀ ಆದಿಶಂಕರರು ಶ್ರೀ ಶಾರದಾಂಬೆಯನ್ನು ಪ್ರತಿಷ್ಠಾಪಿಸಿದ ಬಳಿಕ ನಾಲ್ಕೂ ದಿಕ್ಕುಗಳಲ್ಲಿ ರಕ್ಷಣಾ ದೇವತೆಗಳನ್ನು ಸ್ಥಾಪಿಸಿದರು. ಅದರಲ್ಲಿ ದಕ್ಷಿಣದಲ್ಲಿರುವ ಹರಾವರಿ ದುರ್ಗಾದೇವಸ್ಥಾನ ವಿದ್ಯಾರಣ್ಯಪುರದಲ್ಲಿದೆ. ಶಕ್ತಿ ಹಾಗೂ ಧಾರ್ಮಿಕ ಕೇಂದ್ರವಾಗಿ ಭಕ್ತರನ್ನು ತನ್ನಡೆಗೆ ಸೆಳೆಯುವ ದುರ್ಗಾ ಮಾತೆಗೆ ಹರಕೆ ಸಲ್ಲಿಸಿದ್ದರೆ ಅದು ನೆರವೇರುತ್ತದೆ ಎಂಬುದು ಐತಿಹ್ಯ. ಇಲ್ಲಿ ಪ್ರತಿ ವರ್ಷ ನಡೆಯುವ ರಥೋತ್ಸವದಲ್ಲಿ ವಿವಿಧ ಪ್ರಾಂತ್ಯಗಳ ಸದ್ಭಕ್ತರು ಆಗಮಿಸಿ ಹರಕೆ ಸಲ್ಲಿಸಿ ವಿಶೇಷ ಪೂಜೆ ನೆರವೇರಿಸುತ್ತಾರೆ.
ಕಿಗ್ಗಾ, ಸಿರಿಮನೆಗೆ ಸಾರಿಗೆ ಸಂಪರ್ಕ ಕೊರತೆ
ಮಳೆ ದೇವರು ಎಂದು ಖ್ಯಾತಿ ಪಡೆದ ಶ್ರೀ ಋಷ್ಯಶೃಂಗ ಸ್ವಾಮಿ ದೇವಸ್ಥಾನ ಪ್ರವಾಸಿಗರ ಪ್ರಸಿದ್ಧ ತಾಣ. ಕಿಗ್ಗಾದಲ್ಲಿ ನೆಲೆಯಾಗಿರುವ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ಇಷ್ಟಾರ್ಥ ಪೂರೈಸುವ ದೇರು ಎಂಬ ಖ್ಯಾತಿಯಿದೆ. ಕೆಳದಿ ಅರಸರ ಕಾಲದಲ್ಲಿ 600 ವರ್ಷಗಳ ಹಿಂದೆ ದೇವಾಲಯ ನಿರ್ಮಾಣವಾಗಿದೆ. ಆದರೆ ಇಲ್ಲಿಗೆ ಬರಲು ಬಸ್ ಸೌಕರ್ಯದ ಕೊರತೆ ಇದೆ. ಕ್ಷೇತ್ರದ ಮತ್ತೊಂದು ಆಕರ್ಷಣೆ ಸಿರಿಮನೆ ಜಲಪಾತ. ಸುತ್ತಮುತ್ತಲೂ ಪ್ರಾಕೃತಿಕ ಸೊಬಗಿನ ನಡುವೆ ಮನಮೋಹಕ ಜಲಪಾತಕ್ಕೆ ಶೃಂಗೇರಿಗೆ ಆಗಮಿಸುವ ಪ್ರವಾಸಿಗರು ಸಿರಿಮನೆ ಜಲಪಾತಕ್ಕೆ ಬಂದೇ ಬರುತ್ತಾರೆ. ಸ್ಥಳೀಯ ಅರಣ್ಯ ಗ್ರಾಮಸಮಿತಿ ಅಂಗಡಿಮುಂಗಟ್ಟುಗಳ ನಿರ್ವಹಣೆ ಮಾಡುತ್ತಿದೆ. ವಸತಿ ಹಾಗೂ ಬಸ್ ಸೌಲಭ್ಯಗಳಿಲ್ಲ.