ಜೋಡಿತಿಮ್ಮಾಪುರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಮಂಜುನಾಥ್ ನಾಯಕ್, ಸಂಪತ್‌ಕುಮಾರ್, ನಾಗರಾಜ್ ಇತರರಿದ್ದರು.  
ಚಿಕ್ಕಮಗಳೂರು

ಜನರಲ್ಲಿ ಅರಿವು ಮೂಡಿಸಿ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವುದು
  • ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು
ಬೀರೂರು: ಹವಾಮಾನ ವೈಪರೀತ್ಯ ಜನರ ಜೀವನ ಮತ್ತು ಆರೋಗ್ಯದ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಆದ್ದರಿಂದ ಮಾಲಿನ್ಯ, ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನದಂಥ ಗಂಭೀರ ಸಮಸ್ಯೆಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಿ ಪರಿಸರ ಸಂರಕ್ಷಣೆಗೆ ಪ್ರಯತ್ನಿಸಬೇಕು ಎಂದು ಮುಖ್ಯಶಿಕ್ಷಕ ಮಂಜುನಾಥ್ ನಾಯಕ್ ಹೇಳಿದರು. 
ಜೋಡಿತಿಮ್ಮಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಹಸಿರು ಪಡೆ ಮತ್ತು ಸಾಲು ಮರದ ತಿಮ್ಮಕ್ಕ ಇಕೋ ಕ್ಲಬ್‌ನಿಂದ ಗಿಡಗಳನ್ನು ನೆಟ್ಟು ಮಾತನಾಡಿದರು. ನೈಸರ್ಗಿಕ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವುದು ಮುಖ್ಯ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಮತ್ತು ಪರಿಸರಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದರು.
ಶಿಕ್ಷಕ ಸಂಪತ್‌ಕುಮಾರ್ ಮಾತನಾಡಿ, ಹಸಿರು ಮನೆ ಅನಿಲಗಳನ್ನು ಕಡಿಮೆ ಮಾಡುವುದರ ಮೂಲಕ ಪರಿಸರವನ್ನು ಸ್ವಚ್ಛ ಪರಿಸರವಾಗಿ ಪರಿವರ್ತಿಸಬೇಕಿದೆ. ಇದನ್ನು ಕಡಿಮೆ ಮಾಡಬೇಕಾದರೆ ಎಲ್ಲರೂ ಸಸಿಗಳನ್ನು ನೀಡುವುದು ಹಾಗೂ ಪೋಷಣೆ ಮಾಡಿ ಬೆಳೆಸುವುದು, ಪರಿಸರ ಪೂರಕ ಜೀವನ ನಿರ್ವಹಣೆ ಮಾಡುವುದು, ಪರಿಸರ ಮಾಲಿನ್ಯ ಆಗದಂತೆ ಎಚ್ಚರ ವಹಿಸುವುದು, ಇ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ನಿರ್ವಹಿಸುವುದು, ಕೈಗಾರಿಕೆಗಳಲ್ಲಿ ಉನ್ನತ ತಂತ್ರಜ್ಞಾನ ಬಳಸಿ ತ್ಯಾಜ್ಯಗಳು ಕಡಿಮೆ ಪ್ರಮಾಣದಲ್ಲಿ ಉಂಟು ಮಾಡಲು ಕ್ರಮ ತೆಗೆದುಕೊಳ್ಳುವುದು, ಸೌರ ವಿದ್ಯುತ್  ಹಾಗೂ ಗಾಳಿಯಿಂದ ವಿದ್ಯುತ್ ತಯಾರಿಸಿ ಬಳಸುವುದು, ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಸದಂತೆ ಎಚ್ಚರವಹಿಸುವುದು, ಈ ರೀತಿ ಕ್ರಮ ತೆಗೆದುಕೊಳ್ಳುವುದರ ಮೂಲಕ ದೇಶವನ್ನು ಮಾಲಿನ್ಯ ರಹಿತವಾಗಿ ಪ್ರಪಂಚದಲ್ಲಿಯೇ ಮೊದಲ ಸ್ಥಾನಕ್ಕೆ ತರಲು ಪ್ರಯತ್ನಿಸುವುದಾಗಿ ಹೇಳಿದರು. 
ಪಿಡಿಒ ನಾಗರಾಜ್, ಶಿಕ್ಷಕರಾದ ಜಯಣ್ಣ, ಮಲ್ಲಿಕಾರ್ಜುನ್, ಸುರೇಶ್, ದೇವರಾಜು, ಎಸ್‌ಡಿಎಂಸಿ ಅಧ್ಯಕ್ಷರಾದ ಶಶಿಕುಮಾರ್, ವಿದ್ಯಾರ್ಥಿಗಳು ಇದ್ದರು.