ಶೃಂಗೇರಿಯಲ್ಲಿ ಪರಿಸರ ಸ್ನೇಹಿ ವಸ್ತುವನ್ನು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಬಿಡುಗಡೆಗೊಳಿಸಿದರು. ನವೀನ್ ಕುಮಾರ್,ಯಶವಂತನಾರಾಯಣ ಇದ್ದರು. 
ಚಿಕ್ಕಮಗಳೂರು

ಪ್ಲಾಸ್ಟಿಕ್ ಬದಲಿಗೆ ಪರಿಸರ ಸ್ನೇಹಿ ವಸ್ತುಗಳನ್ನು ತಯಾರಿಸಿ

ಜಿ.ಹೆಚ್. ಧನ್ಯಕುಮಾರ್
ಶೃಂಗೇರಿ: ಪ್ಲಾಸ್ಟಿಕ್ ಬದಲಿಗೆ ಪರಿಸರ ಸ್ನೇಹಿ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಂದಲ್ಲಿ ಉಂಟಾಗುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಸ್ಥಳೀಯ ಉದ್ಯಮಿ ಯಶವಂತ್ ಬೆಂಗಳೂರಿನಲ್ಲಿ ಆರಂಭಿಸಿರುವ ಪರಿಸರ ಸ್ನೇಹಿ ಕುಡಿಯುವ ನೀರಿನ ಬಾಟಲ್, ಪೌಚ್ ಸಹಿತ ವಿವಿಧ ಉತ್ಪನ್ನಗಳಿಗೆ ಚಾಲನೆ ನೀಡಿ, ಆಶೀರ್ವದಿಸಿ ಮಾತನಾಡಿ, ಪ್ಲಾಸ್ಟಿಕ್ ಆರಂಭದಲ್ಲಿ ಬಂದಾಗ ಅತ್ಯಂತ ಉಪಯುಕ್ತ ವಸ್ತು ಎಂದು ಭಾವಿಸಲಾಗಿತ್ತು.ಅಗತ್ಯಕ್ಕಿಂತ ಹೆಚ್ಚು ಬಳಕೆಯಿಂದ ಪ್ಲಾಸ್ಟಿಕ್ ಈಗ ಮಾರಕವಾಗಿದ್ದು, ಇದರ ಕಡಿಮೆ ಬಳಕೆಗೆ ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಿದೆ. ವಸ್ತುವನ್ನು ಕೊಳ್ಳುವಾಗ, ನೀರಿನ ಬಾಟಲಿ ಈಗ ಅನಿವಾರ್ಯವಾಗಿದ್ದು, ಮಣ್ಣಿನಲ್ಲಿ ಕರಗುವ ಹೊಸ ಉತ್ಪಾದನೆ ಮಾರುಕಟ್ಟೆಗೆ ಬಂದಲ್ಲಿ ಅನೇಕ ಸಮಸ್ಯೆಗೆ ಪರಿಹಾರ ದೊರಕುತ್ತದೆ ಎಂದರು.
ಏರಿ ಪ್ಯಾಕೇಜ್ ಸಂಸ್ಥೆ ಉದ್ಯಮಿ ಯಶವಂತನಾರಾಯಣ ಮಾತನಾಡಿ, ಈಗಾಗಲೇ ಪ್ಲಾಸ್ಟಿಕ್ ಕ್ಯಾರಿ ಚೀಲ ಉತ್ಪಾದನೆ ಮಾಡಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದರೊಂದಿಗೆ ಈಗ ಪ್ಲಾಸ್ಟಿಕ್ ಬಳಕೆಯಾಗುವ ಬದಲಿ ಉತ್ಪನ್ನವನ್ನು ತಯಾರಿಸಲಾಗಿದೆ. ಕುಡಿಯುವ ನೀರಿನ ಬಾಟಲಿ, ಚಮಚ, ಫೋರ್ಕ್, ಪೌಚ್ ಮುಂತಾದ ವಸ್ತುಗಳನ್ನು ತಯಾರಿಸಲಾಗಿದೆ. ತರಕಾರಿ ಪಿಷ್ಠದಿಂದ ತಯಾರಿಸಲಾಗಿರುವ ಈ ವಸ್ತು 6-12 ತಿಂಗಳಿನಲ್ಲಿ ಮಣ್ಣಿನೊಂದಿಗೆ ಸೇರಿ ಕರಗುತ್ತದೆ. ಪರಿಸರಕ್ಕೆ ಪೂರಕವಾದ ವಸ್ತು ಬಳಕೆಯಿಂದ ಪರಿಸರ ಮಾಲಿನ್ಯವೂ ತಗ್ಗಲಿದೆ. ನೂತನ ಉತ್ಪನ್ನ ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದರು.
ಜಗದ್ಗುರುಗಳು ನೂತನ ಪರಿಸರ ಸ್ನೇಹಿ ವಸ್ತುವನ್ನು ಬಿಡುಗಡೆ ಮಾಡಿದರು. ಜಗದ್ಗುರುಗಳ ಆಪ್ತ ಸಹಾಯಕರಾದ ಶಂ.ನ.ಕೃಷ್ಣಮೂರ್ತಿ ಭಟ್ಟ, ಶಮಂತಶರ್ಮ, ನವೀನ್ ಕುಮಾರ್ ಇದ್ದರು.