ಶ್ರೀ ಶಾರದಾ ದೇಗುಲದ ಶ್ರೀ ವಾಗ್ದೇವಿ ಅಕ್ಷರಾಭ್ಯಾಸ ಮಂಟಪದಲ್ಲಿ ಪಾಲಕರು ಮಕ್ಕಳ ಅಕ್ಷರಾಭ್ಯಾಸಕ್ಕೆ ಕಾಯುತ್ತಿರುವುದು.
ಶೃಂಗೇರಿ: ಶ್ರೀ ಶಾರದಾಪೀಠದ ಶಾರದಾಂಬೆಗೆ ಶನಿವಾರ ವರ್ಷದ ಪ್ರಥಮ ಮಹಾಭಿಷೇಕ ನೆರವೇರಿತು. ಸಾಲಂಕೃತಗೊಂಡ ಜಗನ್ಮಾತೆಗೆ ಋತ್ವಿಜರಿಂದ ವಿಶೇಷಪೂಜೆ ನಡೆಯಿತು. ವೇದಮಂತ್ರಪಠಣ, ಅಭಿಷೇಕ, ವಿಶೇಷಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮ ಜರುಗಿತು. ಜಗದ್ಗುರುಗಳು ವಿಶೇಷ ಪೂಜೆಯಲ್ಲಿ ಭಾಗಿಯಾದರು. ವರ್ಷಕ್ಕೆ ಮೂರು ಬಾರಿ ಮಾತ್ರ ಶಾರದೆಗೆ ಮಹಾಭಿಷೇಕ ನಡೆಯುತ್ತದೆ.
ಶಾಲೆಗಳಿಗೆ ರಜೆ ಇದ್ದ ಕಾರಣ ಶಾರದಾಂಬಾ ದೇವಾಲಯವು ಶನಿವಾರ ಪ್ರವಾಸಿಗರಿಂದ ತುಂಬಿತ್ತು. ನಾನಾಪ್ರಾಂತ್ಯಗಳಿಂದ ಬಂದ ಪಾಲಕರು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದರು. ಪಟ್ಟಣದ ಗಾಂಧಿ ಮೈದಾನ ವಾಹನಗಳಿಂದ ಭರ್ತಿಯಾಗಿತ್ತು. ವಸತಿಗೃಹಗಳು ಹಾಗೂ ಹೋಂ ಸ್ಟೇಗಳು ಪ್ರವಾಸಿಗರಿಂದ ಭರ್ತಿಯಾಗಿದ್ದವು. ಹೋಟೆಲ್‌ಗಳಲ್ಲಿ ವ್ಯಾಪಾರ ಜೋರಾಗಿತ್ತು. ಸರತಿ ಸಾಲಿನಲ್ಲಿ ನಿಂತು ಪ್ರವಾಸಿಗರು ಜಗನ್ಮಾತೆ, ತೋರಣಗಣಪತಿ, ಶ್ರೀ ವಿದ್ಯಾಶಂಕರ ದೇವಾಲಯಗಳನ್ನು ವೀಕ್ಷಿಸಿದರು.