ಕಡೂರಲ್ಲಿ ಆಯೋಜಿಸಿದ್ದ ಕರ್ನಾಟಕ ಮಾದರ ಮಹಾ ಸಭಾ ಸದಸ್ಯತ್ವ ನೊಂದಣಿ ಅಭಿಯಾನದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿದರು.
ಕಡೂರು: ಮುಂದಿನ ದಿನಗಳಲ್ಲಿ ಮಾದಿಗ ಸಮಾಜವನ್ನು ಮಾದರ ಮಹಾಸಭಾ ಮೂಲಕ ಸಂಘಟನಾತ್ಮಕವಾಗಿ ಬಲವರ್ಧನೆಗೊಳಿಸುವ ಆಶಯ ಹೊಂದಲಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.
ಮಲ್ಲೇಶ್ವರದ ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ನಡೆದ ಕರ್ನಾಟಕ ಮಾದರ ಮಹಾ ಸಭಾ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜಿಲ್ಲಾ ಮಾದಿಗ ಮುಖಂಡರ ಸಭೆಯಲ್ಲಿ ಮಾತನಾಡಿ, ಈಗಾಗಲೇ ಇತರೆ ಸಮುದಾಯಗಳು ಶೈಕ್ಷಣಿಕ ಅಭಿವೃದ್ಧಿಗೆ ಮಹಾಸಭಾಗಳನ್ನು ರಚಿಸಿಕೊಂಡು ಅಭಿವೃದ್ಧಿಯಾಗುತ್ತಿವೆ. ಅದರ ಮಾದರಿಯಲ್ಲಿ ಮಹಾಸಭಾ ಕಾರ್ಯಚಟುವಟಿಕೆಗಳನ್ನು ರೂಪಿಸಲು ಆರಂಭಿಕವಾಗಿ ಸಮುದಾಯದ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದರು.
ಮಾದಿಗ ಸಮುದಾಯ ದುರ್ಬಲವಾಗಿದ್ದು, ಹಿಂದೆ ಹಿರಿಯರು ನಮಗಾಗಿ ಮಾಡಿದ ಬೆಲೆ ಬಾಳುವ ಜಾಗ ಇತರರ ಪಾಲಾಗಿದೆ. ಒಳಮೀಸಲಾತಿ ಅನುಷ್ಠಾನದಿಂದ ನಮ್ಮ ಸಮುದಾಯಕ್ಕೆ ಶೈಕ್ಷಣಿಕವಾಗಿ ಮೀಸಲಾತಿ ದೊರೆತಿದೆ. ಒಳ ಮೀಸಲಾತಿಯ ಮೊದಲ ಫಲಾನಿಭವಿಗಳೇ ವೈದ್ಯಕೀಯ, ಇಂಜಿನಿಯರಿಂಗ್ ವಿದ್ಯಾರ್ಥಿಗಳು. ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣದಲ್ಲಿ ದೊರೆತಿರುವ ಮೀಸಲಾತಿಯ ಸದುಪಯೋಗವಾಗಬೇಕು ಎಂದರೆ ನಮ್ಮ ಸಮುದಾಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಇತರೆ ಪ್ರಬಲ ಸಮಾಜಗಳು ಸಂಘಟನೆ ಮೂಲಕ ಮತ್ತಷ್ಟು ಪ್ರಬಲವಾಗುತ್ತಿವೆ. ಸರ್ಕಾರದ ಯಾವುದೇ ಯೋಜನೆ ಅಥವಾ ಅನುದಾನ ಒಳಮೀಸಲಾತಿ ಪ್ರಕಾರ ಶೇ.6ರಷ್ಟು ಮೀಸಲಾತಿ ಮಾದಿಗ ಸಮುದಾಯಕ್ಕೆ ದೊರೆಯ ಬೇಕು.ಈ ಕಾರ್ಯ ಪ್ರಮಾಣಿಕವಾಗಿ ಆಗಬೇಕು ಎಂಬುವುದು ನನ್ನ ಆಗ್ರಹ ಎಂದರು.