ಶೃಂಗೇರಿ ಬಿಜಿಎಸ್‌ನ ಬಿ.ಎಡ್.ಕಾಲೇಜಿನಲ್ಲಿ ಆಯೋಜಿಸಿದ್ದ ನೂತನ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಆದಿಚುಂಚನಗಿರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಉದ್ಘಾಟಿಸಿದರು. ಪ್ರಸನ್ನಕುಮಾರ್, ಶಂಕರ್ ನಾಯ್ಕ, ರಮೇಶ್, ಧನ್ಯಕುಮಾರ್, ಎಚ್.ಎನ್.ವಿಶ್ವನಾಥ್ ಇದ್ದರು.
ಶೃಂಗೇರಿ: ಪ್ರಶಿಕ್ಷಣಾರ್ಥಿಗಳು ಕಾಲಘಟ್ಟ ಅರಿತು ಮುನ್ನಡೆಯಬೇಕು. ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ಅವರ ಸೃಜನಶೀಲತೆಗೆ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ತಿಳಿಸಿದರು.
ಶೃಂಗೇರಿ ಬಿಜಿಎಸ್ ಸಭಾ ಭವನದಲ್ಲಿ ಬಿ.ಎಡ್.ಕಾಲೇಜಿನಂದ ಶನಿವಾರ ಆಯೋಜಿಸಿದ್ದ ನೂತನ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕರು ವಿದ್ಯಾರ್ಥಿಗಳ ಜೀವನ ರೂಪಿಸುವುದು ಸುಲಭದ ಕೆಲಸವಲ್ಲ. ಅದೊಂದು ಪವಿತ್ರ ಕಾರ್ಯ. ಕಲಿಯಲು ಆಸಕ್ತಿ ಇದ್ದರೆ ತರಬೇತಿ ಅಗತ್ಯವಿಲ್ಲ. ಪುಸ್ತಕದಲ್ಲಿ ಪಡೆದ ಶಿಕ್ಷಣದ ಜತೆಗೆ ಜೀವನದ ಅನುಭವದ ವಿದ್ಯೆ ಅಗತ್ಯ. ಮಕ್ಕಳ ಅಂತರ್ಗತದಲ್ಲಿ ಅಡಗಿರುವ ಕ್ರಿಯಾಶೀಲತೆಯನ್ನು ಶಿಕ್ಷಕರು ಹೊರತೆಗೆಯಬೇಕು. ಸಾಂಸ್ಕೃತಿಕ ಭಾವವಿದ್ದರೆ ಮನಸ್ಸು ಸ್ವಚ್ಛವಾಗುತ್ತದೆ. ವಿದ್ಯಾರ್ಥಿಯ ವ್ಯಕ್ತಿತ್ವ ರೂಪಿಸಲು ಪಾಲಕರು ಮತ್ತು ಗುರುವಿನ ಪಾತ್ರ ಮಹತ್ವ ಎಂದರು.
ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಎಚ್.ಎನ್.ವಿಶ್ವನಾಥ್ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ಆತ್ಮವಿಶ್ವಾಸವಿರಬೇಕು. ಸಮಾಜ ರೂಪಿಸುವ ಅದ್ಭುತ ಶಕ್ತಿ ಶಿಕ್ಷಕರಿಗಿದೆ. ಶಿಕ್ಷಕರು ಶಿಕ್ಷಣದ ಜತೆ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣಕ್ಕೆ ಪ್ರಾಮುಖ್ಯ ನೀಡಬೇಕು ಎಂದರು.
ಪ್ರಾಚಾರ್ಯ ಕೆ.ಸಿ.ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ಪ್ರತಿ ಹಂತದಲ್ಲಿ ಗುರುಗಳ ಮಾರ್ಗದರ್ಶನ ಪಡೆದು ಭವಿಷ್ಯ ರೂಪಿಸುವತ್ತ ಹೆಚ್ಚಿನ ಗಮನ ನೀಡಬೇಕು. ವಿದ್ಯಾರ್ಥಿಗಳು ಉತ್ತಮ ಗುಣ, ಧೈರ್ಯ, ಏಕಾಗ್ರತೆ, ಶ್ರದ್ಧೆ ಬೆಳೆಸಿಕೊಂಡಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ತಿಳಿಸಿದರು. ದರ್ಶಿನಿ ಸಂಯುಕ್ತ ಪ್ರೌಢಶಾಲೆ ಮುಖ್ಯಶಿಕ್ಷಕ ಕಿರಣ್‌ಕುಮಾರ್, ಪ್ರಾಧ್ಯಾಪಕರಾದ ರಮೇಶ್, ಅಮೃತಾ, ಧನ್ಯಕುಮಾರ್ ಇದ್ದರು.