ಶೃಂಗೇರಿಯಲ್ಲಿ ಸಹಕಾರ ಭಾರತಿ ಆಯೋಜಿಸಿದ್ದ ರಾಜ್ಯ ಹಾಗೂ ಜಿಲ್ಲಾಮಟ್ಟದ ಸಂಘಟನಾ ಕಾರ್ಯದರ್ಶಿಗಳ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮವನ್ನು ಸಿ.ಟಿ.ರವಿ ಉದ್ಘಾಟಿಸಿದರು.
ಶೃಂಗೇರಿ: ಸಹಕಾರ ಚಳವಳಿಯ ಮೂಲ ಆಶಯಗಳನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಪಟ್ಟಣದಲ್ಲಿ ಸಹಕಾರ ಭಾರತಿ ಕರ್ನಾಟಕ ಆಯೋಜಿಸಿದ್ದ ರಾಜ್ಯ ಹಾಗೂ ಜಿಲ್ಲಾಮಟ್ಟದ ಸಂಘಟನಾ ಕಾರ್ಯದರ್ಶಿಗಳ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರಿ ಕ್ಷೇತ್ರ ಸಮಾಜ ಕೇಂದ್ರಿತವಾಗಬೇಕು. ಕುಟುಂಬ ಹಾಗೂ ವ್ಯಕ್ತಿಗಳಿಂದ ಮುಕ್ತವಾಗಬೇಕು. ಸಹಕಾರ ಭಾರತಿ ಕೇವಲ ಸಹಕಾರಿ ಸಂಸ್ಥೆಗಳ ನಿರ್ವಹಣೆಗೆ ಸೀಮಿತವಾದ ಸಂಘಟನೆಯಲ್ಲ. ಸಮಾಜದ ಪುನರುತ್ಥಾನ ಮತ್ತು ರಾಷ್ಟ್ರ ನಿರ್ಮಾಣದ ಗುರಿಯೊಂದಿಗೆ ಕಾರ್ಯನಿರ್ವಹಿಸುವ ಚಳವಳಿಯಾಗಿದೆ ಎಂದರು.
ಭಾರತವನ್ನು ಶಕ್ತಿಶಾಲಿ ರಾಷ್ಟ್ರವಾಗಿ ರೂಪಿಸುವುದು ನಮ್ಮೆಲ್ಲರ ಗುರಿ. ಭಾರತ ವಿಶ್ವಗುರು ಆಗಬೇಕು ಎನ್ನುವುದು ಜಗತ್ತಿನ ಪ್ರಾಬಲ್ಯ ಸಾಧಿಸಲು ಅಲ್ಲ. ಜಗತ್ತಿನ ಕಲ್ಯಾಣ ಬಯಸುವ ಭಾರತೀಯ ಚಿಂತನೆಗಳು ಜಾಗತಿಕ ಮಟ್ಟದಲ್ಲಿ ಮುನ್ನಡೆಸಿದಾಗ ವಿಶ್ವಕ್ಕೆ ಒಳಿತಾಗುತ್ತದೆ ಎಂಬ ನಂಬಿಕೆ ಅದರ ಹಿಂದಿದೆ ಎಂದರು.
ಭಾರತದಲ್ಲಿ ಸಹಕಾರಿ ಚಳವಳಿಗೆ ಶತಮಾನದ ಇತಿಹಾಸವಿದೆ. ಅದರ ಮೂಲ ತತ್ವ ಭಾರತೀಯ ಜೀವನದ ಪದ್ಧತಿಯಲ್ಲಿ ಅಡಗಿದೆ. ವೇದಗಳಲ್ಲಿ ಒಟ್ಟಾಗಿ ನಡೆಯುವ ಜೀವನದ ಪರಿಕಲ್ಪನೆ ನೀಡಲಾಗಿದೆ. ಸಹಕಾರಿ ಚಳವಳಿ ಎಂಬ ಹೆಸರು ಇರಲಿಲ್ಲ ಅಷ್ಟೇ. ಆದರೆ ಅದರ ತತ್ವಗಳು ಜೀವಂತವಾಗಿತ್ತು. ಗ್ರಾಮೀಣ ಸಮಾಜದಲ್ಲಿ ಕೃಷಿ ಉತ್ಪನ್ನಗಳಲ್ಲಿ, ವಿವಿಧ ವೃತ್ತಿ ಸಮುದಾಯಗಳಿಗೆ ಪಾಲು ಮೀಸಲಿಡುವ ಪದ್ಧತಿ, ದೇವಸ್ಥಾನಗಳ ಜಾತ್ರೆ ಹಾಗೂ ಉತ್ಸವಗಳ ನಿರ್ವಹಣೆ, ಕೆರೆ-ಕಟ್ಟೆ, ಶಾಲೆ, ದೇವಾಲಯಗಳ ನಿರ್ಮಾಣ ಮತ್ತು ನಿರ್ವಹಣೆ ಎಲ್ಲವೂ ಸಹಕಾರಿ ಮನೋಭಾವದ ಆಧಾರದ ಮೇಲೆ ನಡೆಯುತ್ತಿದ್ದವು ಎಂದು ತಿಳಿಸಿದರು.