ಬಾಳೆಹೊನ್ನೂರು: ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯದ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಎಸ್. ಶೆಟ್ಟಿ ಹೇಳಿದರು.
ರಾಜ್ಯದ ಗೃಹ ಇಲಾಖೆಯ ವ್ಯಾಪ್ತಿ ಅತ್ಯಂತ ದೊಡ್ಡದಾಗಿದ್ದು ಸುಮಾರು 906 ಪೊಲೀಸ್ ಠಾಣೆಗಳು, 230ಕ್ಕೂ ಹೆಚ್ಚು ವೃತ್ತ ಕಚೇರಿಗಳು, 31 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗಳು ಹಾಗೂ 15ಕ್ಕೂ ಹೆಚ್ಚು ಐಜಿಪಿ ಹುದ್ದೆಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಸುಮಾರು 1.13 ಲಕ್ಷ ಪೊಲೀಸ್ ಸಿಬ್ಬಂದಿ ಇದ್ದರೂ ಸುಮಾರು 18 ಸಾವಿರ ಸಿಬ್ಬಂದಿ ಕೊರತೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂಥ ದೊಡ್ಡ ಇಲಾಖೆಯ ಹೊಣೆಗಾರಿಕೆ ವಹಿಸಿಕೊಂಡಿರುವ ಪ್ರಿಯಾಂಕ್ ಖರ್ಗೆ ರಾಜ್ಯದ ಜನರ ಜೀವ ಮತ್ತು ಆಸ್ತಿಯ ರಕ್ಷಣೆಗೆ ಆದ್ಯತೆ ನೀಡಬೇಕು. ರಾಜ್ಯದಲ್ಲಿ ಪ್ರತಿ ವಷರ್ ಎರಡು ಲಕ್ಷಕ್ಕೂ ಅಧಿಕ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು, ಕಳ್ಳತನ, ದರೋಡೆ, ಅತ್ಯಾಚಾರ ಇತರ ಗಂಭೀರ ಅಪರಾಧಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ರಾಜ್ಯದಲ್ಲಿ 15ರಿಂದ 25 ಸಾವಿರದವರೆಗೆ ರೌಡಿಶೀಟರ್‌ಗಳು ಇದ್ದಾರೆ ಎನ್ನುವ ಅಂಕಿ ಅಂಶಗಳಿವೆ. ಇತ್ತೀಚೆಗೆ ಅನೇಕ ರೌಡಿಶೀಟರ್‌ಗಳನ್ನು ಪಟ್ಟಿಯಿಂದ ಹೊರಗಿಡುವ ಪ್ರಕ್ರಿಯೆಗಳು ನಡೆದಿವೆ. ಈ ರೀತಿಯ ವಿಷಯಗಳ ಬಗ್ಗೆ ಗೃಹ ಇಲಾಖೆ ಗಂಭೀರವಾಗಿ ಚಿಂತನೆ ನಡೆಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು.