ಮೂಡಿಗೆರೆಯಲ್ಲಿ ಎದ್ದೇಳು ಕರ್ನಾಟಕ ಸಂಘಟನೆಯಿಂದ ಎಸ್‌ಐಆರ್ ವಿರೋಧಿ ಸಮಾವೇಶ ನಡೆಯಿತು. ಬಿ.ಬಿ.ನಿಂಗಯ್ಯ, ಬಿ.ರುದ್ರಯ್ಯ, ಜಾಕಿರ್ ಹುಸೇನ್ ಇತರರಿದ್ದರು.
ಮೂಡಿಗೆರೆ: ದೇಶದಲ್ಲಿ ಪ್ರಜಾಪ್ರಭುತ್ವ ಸಮರ್ಪಕವಾಗಿ ಜಾರಿಯಾಗಬೇಕಾದರೆ ಈಗಿನ ಆಡಳಿತದ ವಿರುದ್ಧ ಮತ್ತೊಮ್ಮೆ ದೇಶಾದ್ಯಂತ ಸ್ವಾತಂತ್ರೃ ಸಂಗ್ರಾಮ ಆರಂಭವಾಗಬೇಕು ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಹೇಳಿದರು.
ಎದ್ದೇಳು ಕರ್ನಾಟಕ ಸಂಘಟನೆಯಿಂದ ಎಸ್‌ಐಆರ್ ವಿರೋಧಿಸಿ ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟಿರುವ ಜಾಥಾ ಮೂಡಿಗೆರೆ ಪಟ್ಟಣಕ್ಕೆ ಆಗಮಿಸಿದಾಗ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿ, ಕೇಂದ್ರ ಸರ್ಕಾರದಿಂದ ಎನ್‌ಆರ್‌ಸಿ, ಸಿಎಎ ಎಂಬ ಮಾರಕ ಕಾಯ್ದೆಯನ್ನು ದೇಶದ ಮೂಲನಿವಾಸಿಗಳ ಮೇಲೆ ಹೇರಲು ಮುಂದಾದಾಗ ದೇಶಾದ್ಯಂತ ನಡೆದ ವಿರೋಧಿ ಆಂದೋಲನದ ಪರಿಣಾಮ ಕೇಂದ್ರ ಸರ್ಕಾರ ಜಾರಿಗೊಳಿಸಲಿಲ್ಲ. ಅದಕ್ಕೆ ಬದಲಾಗಿ ಈಗ ಎಸ್‌ಐಆರ್ ಜಾರಿಗೊಳಿಸಲು ಮುಂದಾಗಿದೆ. ಎಸ್‌ಐಆರ್‌ನಲ್ಲಿ ಮೂಲನಿವಾಸಿ ಮುಸ್ಲಿಮರು ಮಾತ್ರವಲ್ಲದೆ ಆದಿವಾಸಿಗಳು, ದಲಿತರು ತಮ್ಮ ಅಸ್ತಿತ್ವ ಕಳೆದುಕೊಳ್ಳಲಿದ್ದಾರೆ ಎಂದರು.
ಎದ್ದೇಳು ಕರ್ನಾಟಕ ಸಂಘಟನೆ ರಾಜ್ಯ ಸಂಚಾಲಕ ಗೌಸ್ ಮೊಹಿಯುದ್ದೀನ್ ಮಾತನಾಡಿ, ಎಸ್‌ಐಆರ್‌ನಿಂದ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತಿತರ ರಾಜ್ಯಗಳಲ್ಲಿ ಮೂಲನಿವಾಸಿಗಳು ತಮ್ಮ ಅಸ್ತಿತ್ವ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಇಂತಹ ಕರಾಳ ಕಾಯ್ದೆ ಜಾರಿಯಾಗಬಾರದೆಂದು ಎದ್ದೇಳು ಕರ್ನಾಟಕ ಸಂಘಟನೆಯಿಂದ 5 ಜಾಥಗಳು ಹೊರಟಿವೆ. ಜೂ.20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಸ್‌ಐಆರ್ ವಿರೋಧಿ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಮ್ ಮಾತನಾಡಿ, ಕೇಂದ್ರ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಜನರ ದಿಕ್ಕುತಪ್ಪಿಸಿ ಮೂಲನಿವಾಸಿಗಳ ಮೇಲೆ ಸವಾರಿ ನಡೆಸುತ್ತಿದೆ. ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಹಿಂದುತ್ವ ಅಪಾಯದಲ್ಲಿದೆ ಎನ್ನುತ್ತ ನಕಲಿ ದೇಶಪ್ರೇಮ ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು.
ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕಿರ್ ಹುಸೇನ್, ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಎಸ್‌ಡಿಪಿಐ ಕ್ಷೇತ್ರ ಸಮಿತಿ ಅಧ್ಯಕ್ಷ ಎಂ.ಯು.ಶರೀಫ್, ಮುಖಂಡರಾದ ಸಿ.ಕೆ.ಇಬ್ರಾಹಿಂ ಹಾಜಿ, ಎಂ.ಎಸ್.ಅನಂತ್, ಎ.ಸಿ.ಅಯೂಬ್ ಹಾಜಿ, ಎಂ.ಎಚ್.ಮಹಮ್ಮದ್ ಹನೀಫ್ ಹೈದ್ರೋಸ್, ಹರೀಶ್ ನಲ್ಕೆ, ಯಾಕೂಬ್, ಕೆ.ಪಿ.ಖಾಲಿದ್, ರಾಮು, ಪಿ.ಕೆ.ಹಮೀದ್, ಸುಲೇಮಾನ್, ಸುರೇಶ್, ಕೌಳಿ ರಾಮು, ಪಿ.ಕೆ.ಹಸನಬ್ಬ, ಫಾರೂಕ್ ಬಣಕಲ್ ಇತರರಿದ್ದರು.