ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿಗೆ ಬರಲು ಯತ್ನಿಸಿದ ಚಿರತೆ. 
ಚಿಕ್ಕಮಗಳೂರು

ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ತಗ್ಗು ಪ್ರದೇಶದಿಂದ
  • ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು
ಮೂಡಿಗೆರೆ: ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ತಡೆಗೋಡೆ ಬಳಿ ಚಿರತೆ ಪ್ರವಾಸಿಗರಿಗೆ ಕಾಣಿಸಿದೆ. ಪ್ರವಾಸಿಗರು ಭಯದಿಂದ ವಾಹನವೇರಿ ಚಿರತೆಯ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. 
ಧರ್ಮಸ್ಥಳದಿಂದ ಬೆಂಗಳೂರಿಗೆ ಬುಧವಾರ ತೆರಳುತ್ತಿದ್ದ ಪ್ರವಾಸಿಗರು ಬೆಳಗ್ಗೆ 7 ಗಂಟೆಗೆ ಚಾರ್ಮಾಡಿ ಘಾಟ್ ಪ್ರದೇಶದ ಹೆದ್ದಾರಿಯಲ್ಲಿ ವಾಹನ ನಿಲ್ಲಿಸಿ ಬೆಟ್ಟ, ಗುಡ್ಡಗಳನ್ನು ನೋಡುತ್ತ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಅದೇ ಸಮಯದಲ್ಲಿ ತಗ್ಗು ಪ್ರದೇಶದಿಂದ ಪ್ರಾಣಿಯೊಂದು ಕಾಡಿನಮಧ್ಯೆ ನುಗ್ಗಿ ಬರುತ್ತಿರುವ ಶಬ್ದ ಕೇಳಿದ ಕೂಡಲೆ ಪ್ರವಾಸಿಗರು ಕುತೂಹಲದಿಂದ ನೋಡಿದ್ದಾರೆ. ಹತ್ತಿರಕ್ಕೆ ಧಾವಿಸುತ್ತಿದ್ದ ಚಿರತೆಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೆ ವಾಹನ ಏರಿದ ಪ್ರವಾಸಿಗರು, ತಡೆಗೋಡೆಯ ಕಿಂಡಿಯಲ್ಲಿ ರಸ್ತೆಯತ್ತ ಬರಲು ಯತ್ನಿಸುತ್ತಿದ್ದ ಚಿರತೆಯ ಫೋಟೋ ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡು ಮುಂದೆ ಸಾಗಿದ್ದಾರೆ. ಚಿರತೆ ಇರುವ ಸುದ್ದಿ ತಿಳಿದೊಡನೆ ಘಾಟ್ ರಸ್ತೆಯ ಪ್ರಯಾಣಿಕರು ಆತಂಕದಿಂದ ಪ್ರಯಾುಣಿಸಿದರು. 
ಚಾರ್ಮಾಡಿ ಘಾಟ್ ಪ್ರದೇಶದ 22 ಕಿ.ಮೀ ಹೆದ್ದಾರಿಯಲ್ಲಿ ಆಗಾಗ ಕಾಡಾನೆ ಮತ್ತಿತರ ಕಾಡುಪ್ರಾಣಿಗಳು ಕಾಣಸಿಗುತ್ತವೆ. ಮಳೆಗಾಲದಲ್ಲಿ ಜಲಪಾತ ವೀಕ್ಷಿಸಲು ಪ್ರವಾಸಿಗರ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಅಲ್ಲಲ್ಲಿ ಪ್ರವಾಸಿಗರ ದಂಡು ಗಂಟೆಗಟ್ಟಲೆ ಕಾಲ ಗುಡ್ಡಗಾಡು ಮತ್ತು ತಗ್ಗು ಪ್ರದೇಶವನ್ನು ನೋಡುತ್ತಾ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುತ್ತಾರೆ. ಒಂಟಿ ಕಾಡಾನೆ, ಕಾಡುಕೋಣಗಳು, ಕಾಳಿಂಗ ಸರ್ಪಗಳು, ಜಿಂಕೆ, ಚಿರತೆಗಳು ಕೆಲವೊಮ್ಮೆ ರಸ್ತೆಗೆ ಬರುತ್ತವೆ.
 ಚಾರ್ಮಾಡಿ ಘಾಟ್ ಹೆದ್ದಾರಿಯ ತಡೆಗೋಡೆ ಬಳಿ ಚಿರತೆ ಪ್ರವಾಸಿಗರಿಗೆ ಕಾಣಸಿರುವ ಮಾಹಿತಿ ಬಂದಿದೆ. ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 22 ಕಿ.ಮೀ ದೂರದವರೆಗೂ ಮೀಸಲು ಅರಣ್ಯವಾದ್ದರಿಂದ ವನ್ಯಮೃಗಗಳು ಸಾಮಾನ್ಯವಾಗಿ ಬೀಡು ಬಿಟ್ಟಿರುತ್ತವೆ. ಪ್ರಯಾಣಿಕರು ಎಚ್ಚರವಹಿಸಬೇಕು. ಪ್ರವಾಸಿಗರು ಅಲ್ಲಲ್ಲಿ ವಾಹನ ನಿಲ್ಲಿಸಿ ಬೆಟ್ಟಗುಡ್ಡಗಳನ್ನು ವೀಕ್ಷಿಸುವುದು, ಫೋಟೋ ಕ್ಲಿಕ್ಕಿಸುವುದು ಅಪಾಯಕಾರಿಯಾಗಿದೆ. ಹಾಗಾಗಿ ವಾಹನಗಳನ್ನು ನಿಲ್ಲಿಸದೆ ಸಾಗುವುದು ಒಳ್ಳೆಯದು. ವನ್ಯಮೃಗಗಳು ರಸ್ತೆಗೆ ಬರದಂತೆ ಅರಣ್ಯ ಸಿಬ್ಬಂದಿ ಎಚ್ಚರವಹಿಸಿದ್ದಾರೆ ಎಂದು ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮಂಜುನಾಥ್ ವಿಜಯವಾಣಿಗೆ ಮಾಹಿತಿ ನೀಡಿದರು.