ಕಳಸದ ಸಂಸೆ ಗ್ರಾಮದ ಬೆಳ್ಳ ಎಂಬಲ್ಲಿ ಕೃಷ್ಣಪ್ಪ ಎಂಬುವವರಿಗೆ ಸೇರಿದ ಜಮೀನು ಭೂ ಕುಸಿತವಾಗಿರುವುದು.
ಕಳಸ: ಸಂಸೆ ಗ್ರಾಮದ ಬಸರೀಕಲ್ಲು ಪ್ರದೇಶದಲ್ಲಿ ಸುರಿದ ನಿರಂತರ ಮಳೆಗೆ ಬೆಳ್ಳ ಗ್ರಾಮದ ಕೃಷ್ಣಪ್ಪ ಎಂಬುವವರಿಗೆ ಸೇರಿದ ತೋಟದಲ್ಲಿ ಭೂಕುಸಿತ ಒಂದು ಎಕರೆಗೂ ಹೆಚ್ಚು ಕಾಫಿ, ಅಡಿಕೆ ತೋಟ ನಾಶವಾಗಿದೆ.
ಸೋಮವಾರ ಬೆಳಗ್ಗೆ 10 ಗಂಟೆಗೆ ಕೃಷ್ಣಪ್ಪ ದಂಪತಿ ತೋಟದಲ್ಲಿ ಇದ್ದಾಗ ಕಲ್ಲುಗಳು ಉರುಳಲಾರಂಭಿಸಿದೆ. ಅಪಾಯ ಅರಿತದಂಪತಿ ಅಲ್ಲಿಂದ ಓಡಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಸುಮಾರು ಒಂದು ಎಕರೆಯಷ್ಟು ತೋಟ ಭೂ ಕುಸಿತದಿಂದ ಜರಿದು ಬಿದ್ದಿದೆ. ಭೂ ಕುಸಿತದಿಂದ ನೂರಾರು ಕಾಫಿ, ಅಡಿಕೆ, ಕಾಳುಮೆಣಸು ಮತ್ತು ಏಲಕ್ಕಿ ಗಿಡಗಳು ನಾಶವಾಗಿದೆ. ಎರಡು ಎಕರೆ ಕೃಷಿ ಭೂಮಿ ಹೊಂದಿರುವ ಈ ಕುಟುಂಬದ ಅರ್ಧದಷ್ಟು ಭೂಮಿ ಮಣ್ಣುಪಾಲಾಗಿರುವುದರಿಂದ ಕುಟುಂಬ ಕಂಗಾಲಾಗಿದೆ.
ನಾವು 40 ವರ್ಷದಿಂದ ಸಾಕಿದ ಕಾಫಿ, ಅಡಿಕೆ ಗಿಡಗಳು ಮಣ್ಣಿನ ಒಳಗೆ ಹೂತುಹೋಗಿವೆ. ನಮಗೆ ಕುಡಿಯಲು ನೀರು ಕೂಡ ಸಿಗುತ್ತಿಲ್ಲ. ಈಗ ಜರಿದಿರುವ ಒಂದು ಎಕರೆ ತೋಟದಲ್ಲಿ ಒಳ್ಳೆ ಅಡಿಕೆ, ಕಾಫಿ ಸಲು ಇತ್ತು. ತೋಟದಲ್ಲಿ ಈಗಲೂ ಮಣ್ಣು ಜರಿಯುತ್ತಿದೆ. ನಮಗೆ ಸರ್ಕಾರ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದರು.
ಬಡತನದಲ್ಲಿರುವ ಕುಟುಂಬ ಕಷ್ಟಪಟ್ಟು ಜೀವನ ಮಾಡುತ್ತಿದ್ದರು.ಇದ್ದ ಅತ್ಯಲ್ಪ ಜಮೀನು ಕೂಡ ಈಗ ಮಣ್ಣು ಪಾಲಾಗಿದೆ. ಸರ್ಕಾರ ಈ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.