ಕಡೂರು ತಾಲೂಕಿನ ಜೋಡಿಹೋಚಿಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಉದ್ಘಾಟಿಸಿದರು. ಸುನೀತಾ ಕಿರಣ್, ಗಿರೀಶ್, ಲತಾ, ಪರಮೇಶ್ ಇತರರಿದ್ದರು.
- ಕಥಾಮಂಜರಿಯಲ್ಲಿ
- ಕಣ್ಣಿಗೆ ಕಟ್ಟುವಂತೆ
ಕಡೂರು: ಕುಮಾರವ್ಯಾಸ ಈ ನಾಡಿನ ಸಾಂಸ್ಕೃತಿಕ ರಾಯಭಾರಿ ಎಂದು ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ವಿದುಷಿ ಸುನೀತಾ ಕಿರಣ್ ತಿಳಿಸಿದರು.
ಜೋಡಿಹೋಚಿಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾ ಕಸಾಪ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಮುರಾರ್ಜಿ ವಸತಿ ಶಾಲೆ, ಜೋಡಿ ಹೋಚಿಹಳ್ಳಿ ಸಹಯೋಗದೊಂದಿಗೆ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಠ್ಯಾಧಾರಿತ ಕುಮಾರವ್ಯಾಸ ಭಾರತದ ಕಥಾ ಪ್ರಸಂಗದಲ್ಲಿ ಗಮಕ ವಾಚನ ಮತ್ತು ವ್ಯಾಖ್ಯಾನ ನೀಡಿ ಮಾತನಾಡಿದರು.
ಕುಮಾರವ್ಯಾಸ ಭಾರತದ ಕಥಾಮಂಜರಿಯಲ್ಲಿ ಪ್ರತಿಯೊಬ್ಬರ ಜೀವನದಲ್ಲೂ ಅಳವಡಿಸಿಕೊಳ್ಳಬೇಕಾದ ಮಹತ್ವದ ಹಾಗೂ ವಿಶೇಷ ಸತ್ವ ಅಡಗಿದೆ. ಸಾಂಸ್ಕೃತಿಕವಾಗಿ ತನ್ನದೇಆದ ಮಹತ್ವ ಪಡೆದುಕೊಂಡಿದೆ. ಕಾವ್ಯದಲ್ಲಿ ಮಹಾಭಾರತದ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ನಮಗೆಲ್ಲರಿಗೂ ಕುಮಾರವ್ಯಾಸರು ರಚಿಸಿದ್ದಾರೆ. ಸಾಹಿತ್ಯದ ಕಂಪನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಈ ಕೃತಿಯಿಂದ ಕಾಣಬಹುದಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಮಕ್ಕಳು ಸಂಸ್ಕಾರ ರೂಢಿಸಿಕೊಳ್ಳಬೇಕು. ಗುರು ಹಿರಿಯರಿಗೆ ಗೌರವ ಕೊಡಬೇಕು. ಆಗ ಈ ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡಲು ಸಾಧ್ಯವಿದೆ ಎಂದರು.
ಮುರಾರ್ಜಿ ವಸತಿಶಾಲೆ ಪ್ರಾಂಶುಪಾಲ ಗಿರೀಶ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಲ್ಲಿ ಪಠ್ಯಾಧಾರಿತ ಕುಮಾರವ್ಯಾಸ ಭಾರತದ ಕಥಾಪ್ರಸಂಗವನ್ನು ಉಲ್ಲೇಖಿಸಿ ಕಾರ್ಯಕ್ರಮವನ್ನು ಆಯೋಜಿಸಿದ್ದು ತುಂಬ ಸಂತೋಷದ ಸಂಗತಿ ಎಂದರು. ತಾಲೂಕು ಕಸಾಪ ಅಧ್ಯಕ್ಷ ಚಿಕ್ಕನಲ್ಲೂರು ಎಸ್.ಪರಮೇಶ್ ಮಾತನಾಡಿ, ಪ್ರತಿಯೊಬ್ಬರೂ ಕನ್ನಡ ನಾಡು, ನುಡಿ, ಭಾಷೆ ಬೆಳೆಸಲು ಪಣತೊಡಬೇಕು ಎಂದರು.
ಕಿತ್ತೂರು ರಾಣಿ ಚನ್ನಮ್ಮ ವಸತಿಶಾಲೆ ಪ್ರಾಂಶುಪಾಲ ಕೆ.ಮಂಜಾನಾಯ್ಕ, ಕಸಾಪ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್, ಕಸಾಪ ಕೋಶಾಧ್ಯಕ್ಷ ಎಚ್.ಕೆ.ಮಂಜುನಾಥ್, ಕಜಾಪ ತಾಲೂಕು ಘಟಕದ ಅಧ್ಯಕ್ಷೆ ಶೋಭಾ ಶ್ರೀನಿವಾಸ್, ಶಿಕ್ಷಕರಾದ ಎಚ್.ಎಂ.ಗಿರೀಶ್, ಉದಯಕುಮಾರ್, ಕೆಂಚಪ್ಪ, ಬಿ.ಕೆ.ಹೊನ್ನಪ್ಪ, ವೀಣಾ ಸುರೇಶ್ ಇತರರಿದ್ದರು.