ಕೆಳಗೂರಲ್ಲಿ ವೇಗದೂತ ಬಸ್‌ನಿಲುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳು, ಗ್ರಾಮಸ್ಥರು ವೇಗದೂತ ಬಸ್ ತಡೆದು ಪ್ರತಿಭಟನೆ ನಡೆಸಿದರು 
ಚಿಕ್ಕಮಗಳೂರು

ಕೆಎಸ್‌ಆರ್‌ಟಿಸಿ ಬಸ್ ವಿದ್ಯಾರ್ಥಿಗಳ ನಿಲುಗಡೆಗಾಗಿ ರಸ್ತೆ ತಡೆ

ಆಲ್ದೂರು: ರಾಷ್ಟ್ರೀಯ ಹೆದ್ದಾರಿ 173 ಕೆಳಗೂರು ಗ್ರಾಮದ ಸಮೀಪ ವೇಗದೂತ ಬಸ್‌ಗಳನ್ನು ನಿಲ್ಲಿಸ ಬೇಕು ಎಂದು ಆಗ್ರಹಿಸಿ ಕೆಳಗೂರು ಗ್ರಾಮದ ಬಸ್‌ನಿಲ್ದಾಣದ ಸಮೀಪ ಗ್ರಾಮಸ್ಥರು ಹಾಗು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಮುಖಂಡ ಭರತ್ ಮಾತನಾಡಿ, ಸರ್ಕಾರ ಎಲ್ಲವನ್ನು ಉಚಿತವಾಗಿ ಕೊಟ್ಟಿದೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್‌ಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯವಹಿಸಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಶಾಲಾ,ಕಾಲೇಜುಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕೆಳಗೂರು ಗ್ರಾಮದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ಹೋಗಬೇಕು, ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಿದ್ದು, ಬೆಳಗ್ಗೆ 9 ರಿಂದ10.30 ರವರೆಗೆ ಸಾರಿಗೆ ಬಸ್‌ಗಳಿಲ್ಲದೆ ಪರದಾಡುವಂತಾಗಿದೆ. ಈ ಮಾರ್ಗದಲ್ಲಿ ವೇಗದೂತ ಬಸ್‌ಗಳು ಹೆಚ್ಚು ಸಂಚರಿಸುತ್ತಿದ್ದು ,ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್‌ನಿಲುಗಡೆ ಮಾಡಬೇಕು ಎಂದು ಸಾರಿಗೆ ಇಲಾಖೆ ಆಧಿಕಾರಿಗಳು ಹಾಗೂ ಮೂಡಿಗೆರೆ ಶಾಸಕರಿಗೆ ಮನವಿ ಮಾಡಲಾಗಿತ್ತು. ಪ್ರಾರಂಭದ ದಿನಗಳಲ್ಲಿ ಎರಡು ದಿನ ಬಸ್‌ನಿಲುಗಡೆ ಮಾಡಲಾಯಿತು. ಈಗ ಮತ್ತೆ ಆದೇ ಸಮಸ್ಯೆ ಮುಂದುವರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಬೇಸತ್ತ ಗ್ರಾಮಸ್ಥರು, ವಿದ್ಯಾರ್ಥಿಗಳು ಸೋಮವಾರ ಮೂಡಿಗೆರೆಯಿಂದ ಚಿಕ್ಕಮಗಳೂರಿಗೆ ಸಾಗುತ್ತಿದ್ದ ವೇಗದೂತ ಬಸ್ ತಡೆದು ನಿಲ್ಲಿಸಿ ಆಧಿಕಾರಿಗಳಿಗೆ ಧಿಕ್ಕಾರ ಕೂಗಿದರು. ಇದು ಸಾಂಕೇತಿಕ ಚಳವಳಿ, ಇನ್ನು ಮುಂದೆ ಬಸ್‌ಗಳನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಗ್ರಾಮದ ಮುಖಂಡರಾದ ಮಂಜಯ್ಯ, ಕೆಳಗೂರು ಪೂರ್ಣೇಶ್, ಭರತ್, ವಿದ್ಯಾರ್ಥಿಗಳು ಇದ್ದರು.