ಕಳಸ ಕರ್ನಾಟಕ ಪಬ್ಲಿಕ್ ಸ್ಕೂಲ್
ಕಳಸ: ಇತ್ತಿಚೀನ ದಿನಗಳಲ್ಲಿ ಖಾಸಗಿ ಶಾಲೆಗಳ ವ್ಯಾಮೋಹ ಹೆಚ್ಚಾಗುತ್ತಿದ್ದು, ಅನೇಕ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಳಿಸುತ್ತಿರುವುದರಿಂದ ರಾಜ್ಯದಲ್ಲಿರುವ ಹಲವು ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿವೆ. ಆದರೆ ಈ ಸಾಮಾನ್ಯ ಧೋರಣೆಗೆ ಅಪವಾದವಾಗಿ ಕಳಸದಲ್ಲಿರುವ ಕಳಸ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್). ಸರ್ಕಾರಿ ಶಾಲೆಗಳೂ ಗುಣಮಟ್ಟದ ಶಿಕ್ಷಣ ನೀಡಬಲ್ಲವು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಈ ಶಾಲೆ.
ಈ ಶೈಕ್ಷಣಿಕ ವರ್ಷದಲ್ಲಿ ಶಾಲೆ ದಾಖಲಾತಿಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ ವರ್ಷ ಪ್ರಾಥಮಿಕ ವಿಭಾಗದಲ್ಲಿ 424 ವಿದ್ಯಾರ್ಥಿಗಳಿದ್ದರೆ, ಈ ಬಾರಿ 476 ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದು 52 ವಿದ್ಯಾರ್ಥಿಗಳ ಹೆಚ್ಚಳವಾಗಿದೆ. ಪ್ರೌಢಶಾಲಾ ವಿಭಾಗದಲ್ಲಿಯೂ ಕಳೆದ ಸಾಲಿನ 434 ವಿದ್ಯಾರ್ಥಿಗಳಿದ್ದರೆ ಈ ಬಾರಿ 451 ವಿದ್ಯಾರ್ಥಿಗಳಿದ್ದಾರೆ. ಶಾಲೆಯ ಪಾಲಕರ ವಿಶ್ವಾಸವನ್ನು ಪ್ರತಿಬಿಂಬಿಸಿದೆ.
ಸರ್ಕಾರಿ ಶಾಲೆ ಎಂದರೆ ಮೂಲ ಸೌಲಭ್ಯಗಳ ಕೊರತೆ ಎಂಬ ಕಲ್ಪನೆಯನ್ನು ಕಳಸ ಕೆಪಿಎಸ್ ಸಂಪೂರ್ಣ ತಳ್ಳಿಹಾಕಿದ್ದು, ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್, ಮಧ್ಯಾಹ್ನ ಬಿಸಿಯೂಟ, ಕ್ಷೀರಭಾಗ್ಯ, ರಾಗಿ ಮಾಲ್ಟ್, ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ. ಹೊರನಾಡು ದೇವಸ್ಥಾನದಿಂದ ಉಚಿತ ನೋಟ್ ಪುಸ್ತಕಗಳನ್ನೂ ನೀಡಲಾಗುತ್ತಿದೆ.
ಶಾಲೆಯಲ್ಲಿ ಸುಸಜ್ಜಿತ ತರಗತಿ ಕೊಠಡಿಗಳು, ಸ್ವಚ್ಛ ಶೌಚಗೃಹಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಿಶಾಲ ಆಟದ ಮೈದಾನ, ಸುಂದರ ಪ್ರಾರ್ಥನಾ ಸಭಾಂಗಣ, ಸಮೃದ್ಧ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಭಾಷಾ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಹಾಗೂ ಅಟಲ್ ಟಿಂಕರಿಂಗ್ ಲ್ಯಾಬ್‌ಗಳಂತಹ ಆಧುನಿಕ ಸೌಲಭ್ಯಗಳು ಲಭ್ಯವಿವೆ. ಪ್ರೊಜೆಕ್ಟರ್, ಟಿವಿ ಹಾಗೂ ಇಂಟರಾಕ್ಟಿವ್ ಬೋರ್ಡ್‌ಗಳ ಮೂಲಕ ತಾಂತ್ರಿಕ ಶಿಕ್ಷಣ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲಾಗುತ್ತಿದೆ.
ಶಾಲೆಯು ಕೇವಲ ಪಠ್ಯ ಶಿಕ್ಷಣಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವಿವಿಧ ಉಚಿತ ತರಬೇತಿಗಳನ್ನು ನೀಡುತ್ತಿದೆ. ಸಂಸ್ಕೃತ, ಯಕ್ಷಗಾನ, ಯೋಗ, ಕರಾಟೆ ಹಾಗೂ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಗಳ ವಿಶೇಷ ತರಬೇತಿಗಳು ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶಗಳನ್ನು ಕಲ್ಪಿಸುತ್ತಿವೆ.