ಶೃಂಗೇರಿಯ ಆದಿಚುಂಚನಗಿರಿ ಮಠದ ಬಿಜಿಎಸ್ ಅವರಣದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಶ್ರೀ ಗುಣನಾಥ ಸ್ವಾಮೀಜಿಗುರುವಂದನೆ ಸಲ್ಲಿಸಿದರು.  
ಚಿಕ್ಕಮಗಳೂರು

ಜ್ಞಾನ, ಆಧ್ಯಾತ್ಮ ಮಾನವ ಜೀವನ ವಿಕಾಸದ ಹಾದಿ

ಜಿ.ಹೆಚ್. ಧನ್ಯಕುಮಾರ್
ಶೃಂಗೇರಿ: ಆಧ್ಯಾತ್ಮ ಮತ್ತು ಜ್ಞಾನ ಇವೆರಡೂ ಮಾನವ ಜೀವನದ ವಿಕಾಸಕ್ಕೆ ಇರುವ ಅಪರೂಪದ ಹಾದಿ. ಆಧ್ಯಾತ್ಮ ಎಂಬುದು ಜ್ಞಾನದೀವಿಗೆ. ಮಾನವನಲ್ಲಿರುವ ಅಜ್ಞಾನ ಹೋಗಲಾಡಿಸಿ ಮಾನವೀಯ ಮೌಲ್ಯಗಳ ಅರಿವನ್ನು ಡಾ.ಬಾಲಗಂಗಾಧರನಾಥ ಸ್ವಾಮೀಜಿ ನೀಡಿದರು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಶೃಂಗೇರಿ ಆದಿಚುಂಚನಗಿರಿ ಶಾಖಾಮಠದ ಬಿಜಿಎಸ್ ಅವರಣದಲ್ಲಿ ಶುಕ್ರವಾರ ಗುರುಪೂರ್ಣಿಮೆ ಪ್ರಯುಕ್ತ ಆಯೋಜಿಸಿದ್ದ ಆಧ್ಯಾತ್ಮಿಕ ಪ್ರವಚನದ ಸಮಾರೋಪ ಹಾಗೂ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ನಮ್ಮ ಬದುಕು ಆಧ್ಯಾತ್ಮ, ಜ್ಞಾನ-ವಿಜ್ಞಾನ ಹಾಗೂ ತಂತ್ರಜ್ಞಾನಗಳ ಬೆಳಕಿನಲ್ಲಿ ನಡೆಯುವುದು ಅನಿವಾರ್ಯ.ಆಧ್ಯಾತ್ಮಿಕ ಪ್ರವಚನದ ಮೂಲಕ ಜ್ಞಾನ ಬೆಳಗುತ್ತದೆ. ಅಧ್ಯಾತ್ಮಿಕತೆ ಹಾಗೂ ವೈಜ್ಞಾನಿಕ ಮನೋಭಾವ ಮೌಲ್ಯಗಳನ್ನು ಪ್ರಜ್ಞಾನದ ತಳಹದಿಯ ಮೇಲೆ ಹಿರಿಯರು ಪ್ರತಿಪಾದಿಸಿದರು ಎಂದರು.
ನಾವು ಮಾಡುವ ಸೇವೆ ಆತ್ಮಸಾಕ್ಷಾತ್ಕಾರಕ್ಕಾಗಿ ಇರುವ ಮಾನಸಿಕ ಸರಣಿ. ಇಂತಹ ಧ್ಯೇಯವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಆದರ್ಶ ಮೌಲ್ಯ ನೀಡಿದವರಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಒಬ್ಬರು. ಅವರ ಭೌತಿಕವಾಗಿ ನಮ್ಮ ಜತೆ ಇಲ್ಲದಿದ್ದರೂ ಅವರು ನೀಡಿ ಹೋದ ಮೌಲ್ಯಗಳನ್ನು ನಾವೆಲ್ಲರೂ ಅನುಸರಿಸಬೇಕು. ದೀನದಲಿತರಲ್ಲಿ ಭಗವಂತನನ್ನು ಕಾಣುತ್ತಾ ಅವರ ಶ್ರೇಯೋಭಿವೃದ್ಧಿಗಾಗಿ ಗುರುಗಳು ಅವಿರತವಾಗಿ ಶ್ರಮಿಸಿದವರು. ಹಾಗಾಗಿ ಅವರು ದೇಶ ಕಂಡ ಅಪರೂಪದ ಮಹಾಮಹೀಮರು ಎಂದರು.
ಬಾಗಲಕೋಟೆಯ ಮಹಾಲಿಂಗಪುರದ ಸದ್ಗುರು ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದ ಗುರುಗಳಾದ ಶ್ರೀಸಹಜಾನಂದ ಸ್ವಾಮೀಜಿ, ಮಹಾರಾಷ್ಟ್ರದ ಸಂಸ್ಕೃತ ವಿದ್ವಾಂಸ ರಾಮಚಂದ್ರಪ್ಪ. ಮಹಾರಾಷ್ಟ್ರದ ಗುರುನಾಥ ಮಹಾರಾಜರು, ಆದಿಚುಂಚನಗಿರಿಯ ಹಾಸನದ ಶಾಖಾ ಮಠದ ಶ್ರೀಶಂಭುನಾಥ ಸ್ವಾಮೀಜಿ, ಆದಿಚುಂಚನಗಿರಿಯ ಎಲ್ಲ ಶಾಖಾ ಮಠದ ಗುರುಗಳು ಉಪಸ್ಥಿತರಿದ್ದರು.