ಕಡೂರಿನ ಜ್ಞಾನಭಾರತಿ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಸೂರಿ ಶ್ರೀನಿವಾಸ್ ಉದ್ಘಾಟಿಸಿದರು. 
ಚಿಕ್ಕಮಗಳೂರು

ದಿ.ಕೆ.ಎಂ.ಕೃಷ್ಣಮೂರ್ತಿ ಅದರ್ಶ ಜನಪ್ರತಿನಿಧಿಗಳಿಗೆ ಮಾದರಿ

ಕಡೂರು: ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಶಾಸಕರಾಗಿದ್ದ ದಿ.ಕೆ.ಎಂ.ಕೃಷ್ಣಮೂರ್ತಿ ಅವರ ಜನಪರ ಕಾಳಜಿ ಸಾಮಾಜಿಕ ಬದ್ಧತೆ ಇತರೆ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಜಿಲ್ಲಾ ವಿಸ್ತರಣಾಧಿಕಾರಿ ಚೆನ್ನಪ್ಪ ಇಂಗ್ಲಳ್ಳಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜ್ಞಾನ ಭಾರತಿ ವಿದ್ಯಾಸಂಸ್ಥೆ ಆಶ್ರಯದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, 1994ರಲ್ಲಿ ಶಾಸಕರಾದ ನಂತರ ಕೆ.ಎಂ.ಕೃಷ್ಣಮೂರ್ತಿ ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ 25 ವಸತಿ ನಿಲಯಗಳು ಸೇರಿದಂತೆ, ಪ್ರೌಢ ಶಾಲೆಗಳು ಮೊರಾರ್ಜಿ ವಸತಿ ಶಾಲೆಗಳು, ಪದವಿ ಪೂರ್ವ ಕಾಲೇಜು ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ ಜಿಟಿಸಿ ಪೊಲೀಸ್ ತರಬೇತಿ ಕೇಂದ್ರ ಹೀಗೆ ಹತ್ತು ಹಲವು ಶೈಕ್ಷಣಿಕ ಕೇಂದ್ರಗಳನ್ನು ತೆರೆಯುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಕನಸು ಸಾಕಾರಗೊಳ್ಳಲು ಶ್ರಮಿಸಿದರು ಎಂದು ಸ್ಮರಿಸಿದರು.
ಜ್ಞಾನ ಭಾರತಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಶರತ್ ಕೃಷ್ಣಮೂರ್ತಿ ಮಾತನಾಡಿ, ಕಡೂರಿನ ಸವಾರ್ಂಗೀಣ ಅಭಿವೃದ್ಧಿಯಲ್ಲಿ ಕೆ.ಎಂ.ಕೃಷ್ಣಮೂರ್ತಿ ಅವರ ಪಾತ್ರ ಮಹತ್ವದ್ದಾಗಿದ್ದರೆ ಸಾಹಿತಿ ಅಜ್ಜಂಪುರ ಜಿ.ಸೂರಿ ಅವರ ಸಾಹಿತ್ಯ ಕೃಷಿಯು ನಾಡಿನಾದ್ಯಂತ ಪಸರಿಸಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸೂರಿ ಶ್ರೀನಿವಾಸ್ ಕಡೂರಿನಲ್ಲಿ ಕನ್ನಡ ಭವನ ಅಸ್ತಿತ್ವಕ್ಕೆ ಬರಲು ಮಾಜಿ ಶಾಸಕ ಕೆ.ಎಂ ಕೃಷ್ಣಮೂರ್ತಿ ಮತ್ತು ಸಾಹಿತಿ ಅಜ್ಜಂಪುರ ಜಿ.ಸೂರಿ ಅವರ ಶ್ರಮವೇ ಪ್ರಮುಖ ಕಾರಣ ಎಂದರು.
ಜ್ಞಾನಭಾರತಿ ಬಿಎಡ್ ಕಾಲೇಜಿನ ಅಧ್ಯಕ್ಷೆ ಸುಜಾತ ಕೃಷ್ಣಮೂರ್ತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್, ಜ್ಞಾನ ಭಾರತಿ ಶಾಲೆ ಮುಖ್ಯಶಿಕ್ಷಕಿ ರಜಿಯಾ ಬಾನು, ಉಪನ್ಯಾಸಕ ಬಸವರಾಜ್, ರಕ್ಷಿತಾ, ಗಗನ್ ಇದ್ದರು.