ಅಚ್ಚುತ ಆಚಾರಿ 
ಚಿಕ್ಕಮಗಳೂರು

ಕಿರುಗುಂದ ಗ್ರಾಮಸೇವಕ ಅಚ್ಯುತ ಆಚಾರಿ ನಿಧನ

ಮೂಡಿಗೆರೆ: ಕಿರುಗುಂದ ಗ್ರಾಮದಲ್ಲಿ 70 ವರ್ಷದಿಂದ ವಾಸವಾಗಿ ಗ್ರಾಮಸ್ಥರ ಸೇವೆಯಲ್ಲಿ ತೊಡಗಿದ್ದ ಅಚ್ಯುತ ಆಚಾರಿ(78) ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಬೆಳ್ತಂಗಡಿ ತಾಲೂಕು ನಾರಾವಿಯ ಅಚ್ಯುತ ಆಚಾರಿ ತಮ್ಮ ಸ್ನೇಹಿತನೊಂದಿಗೆ 70 ವರ್ಷದ ಹಿಂದೆ ಊರಿನಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದಾಗ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದ್ದಾರೆ. ಹುಲ್ಲು ಸಂಪೂರ್ಣ ಬೆಂಕಿಯಲ್ಲಿ ಆಹುತಿಯಾದಾಗ ಮನೆಯವರು ಹೊಡೆಯುತ್ತಾರೆ ಎಂದು ಹೆದರಿ ಇಬ್ಬರು ಮಕ್ಕಳು ತಪ್ಪಿಸಿಕೊಳ್ಳಲು ಬೇರೆ ಬೇರೆ ಲಾರಿ ಹತ್ತಿದ್ದಾರೆ. ಅಚ್ಯುತ ಆಚಾರಿಯನ್ನು ಮೂಡಿಗೆರೆ ಸಮೀಪದ ಹ್ಯಾಂಡ್‌ಪೋಸ್ಟ್ ವೃತ್ತದ ಸಮೀಪ ಲಾರಿಯಿಂದ ಇಳಿಸಿದ್ದಾರೆ. ಮಳೆಗೆ ಸಿಲುಕಿದ ಅಚ್ಯುತ ಆಚಾರಿ ಹಸಿವಿನಿಂದ ಚಳಿಯಲ್ಲಿ ನಡುಗುತ್ತ ನಿಂತಿರುವುದನ್ನು ಗಮನಿಸಿದ ಕಿರುಗುಂದದ ಎಂ.ಎ.ರಜಾಕ್ ಅವರು ಗ್ರಾಮಕ್ಕೆ ಕರೆತಂದಿದ್ದಾರೆ.
ಅಂದಿನಿಂದ ಗ್ರಾಮದ ಎಲ್ಲ ಮನೆಗಳಲ್ಲೂ ಊಟ ಮಾಡುತ್ತಿದ್ದರು. ಗ್ರಾಮದ ಪ್ರತಿ ಮನೆಯವರೂ ಈತನ ಕೈಲಿ ತಮಗೆ ಬೇಕಾದ ಬಟ್ಟೆ, ಹಣ್ಣು, ತರಕಾರಿ ಸೇರಿದಂತೆ ಮನೆಗೂ ಅಗತ್ಯವಿದ್ದ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು. ಅಚ್ಯುತ ಇಲ್ಲದೆ ಕಿರುಗುಂದ ಗ್ರಾಮದ ಮನೆಗಳಲ್ಲಿ ಯಾವುದೇ ಕೆಲಸ ನಡೆಯುತ್ತಿರಲಿಲ್ಲ.
ಅಚ್ಯುತ ಗುರುವಾರ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದಾಗ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಪ್ರತಿಯೊಬ್ಬರೂ ಕಣ್ಣೀರು ಹಾಕಿದ್ದರು. ಸೋಮವಾರ ಬೆಂಗಳೂರಿನಿಂದ ಅಚ್ಯುತ ಆಚಾರಿ ಅವರ ಮೃತದೇಹ ಕಿರುಗುಂದ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಿದರು. ಗ್ರಾಮದಲ್ಲಿ ಗಾಢ ಮೌನ ಆವರಿಸಿತ್ತು. ಅವಿವಾಹಿತರಾಗಿದ್ದ ಅವರು ಪಾಲಕರು ಮತ್ತು ಕುಟುಂಬವನ್ನು ನೋಡಲು ಒಮ್ಮೆಯೂ ಹೋಗಿರಲಿಲ್ಲ. ಗ್ರಾಮಸ್ಥರೇ ಅವರಿಗೆ ಆಧಾರಸ್ತಂಭವಾಗಿದ್ದರೆ, ಗ್ರಾಮಸ್ಥರಿಗೆ ಅಚ್ಯುತ ಅಚಾರಿ ವರದಾನವಾಗಿದ್ದರು. ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು.