ಮಲೆನಾಡು ರೈತ ಹಿತರಕ್ಷಣಾ ಸಮಿತಿಯಿಂದ ಅಡ್ಡಗದ್ದೆ ಗ್ರಾಪಂ ವ್ಯಾಪ್ತಿಯಲ್ಲಿ ಮನೆ-ಮನೆ ತೆರಳಿ ಕರಪತ್ರ ಅಭಿಯಾನ ಹಾಗೂ ಸಹಿ ಸಂಗ್ರಹ ಮಾಡಲಾಯಿತು
ಶೃಂಗೇರಿ: ತಾಲೂಕಿನ ಪಟ್ಟಣ, ಕೆರೆಕಟ್ಟೆ, ನೆಮ್ಮಾರ್, ಕಿಗ್ಗಾ, ಅಡ್ಡಗದ್ದೆ, ಮೆಣಸೆ ಮುಂತಾದ ಗ್ರಾಪಂ ವ್ಯಾಪ್ತಿಯಲ್ಲಿ ಮಲೆನಾಡು ರೈತ ಹಿತರಕ್ಷಣಾ ಸಮಿತಿಯಿಂದ ಶುಕ್ರವಾರ ಕ್ಷೇತ್ರಮಟ್ಟದಲ್ಲಿ ಮಲೆನಾಡಿಗರ ಬದುಕನ್ನು ಉಳಿಸಿ ಜನಜಾಗೃತಿ ಯಾತ್ರೆ ಸಂಚರಿಸಿ ಅರಿವು ಮೂಡಿಸುವ ಕಾರ್ಯ ಹಾಗೂ ಮನೆ-ಮನೆ ತೆರಳಿ ಕರಪತ್ರ ಅಭಿಯಾನ ಹಾಗೂ ಸಹಿ ಸಂಗ್ರಹ ಮಾಡಲಾಯಿತು.
ಕಿಗ್ಗಾ ಗ್ರಾಪಂ ವ್ಯಾಪ್ತಿಯಲ್ಲಿ ಜನಜಾಗೃತಿ ಸಭೆ ಉದ್ದೇಶಿಸಿ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಎಸ್.ರಂಜಿತ್ ಮಾತನಾಡಿ, ಭವಿಷ್ಯದ ಆತಂಕದ ದಿನಗಳು ನಮಗೆ ಪ್ರಸ್ತುತ ಕೆರೆಕಟ್ಟೆ ರೂಪದಲ್ಲಿ ಕಣ್ಣಿಗೆ ಕಾಣುತ್ತಿದೆ. ಕೆರೆಕಟ್ಟೆ ಐಸಿಯು ಆದರೆ ಇತರ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಸೆಮಿ ಐಸಿಯು ಆಗಿವೆ. ನಾವೆಲ್ಲರೂ ಒಗ್ಗೂಡಿ ಎಚ್ಚೆತ್ತುಕೊಳ್ಳದಿದ್ದರೆ ಮಲೆನಾಡಿನ ಸ್ಥಿತಿಗತಿ ಶೋಚನೀಯವಾಗಲಿದೆ. ಮಲೆನಾಡಿನ ರೈತರ ಹಾಗೂ ಜನಸಾಮಾನ್ಯರ ಬದುಕು ಉಳಿಸುವ ಆಶಯದಿಂದ ಯಾತ್ರೆ ಪ್ರಾರಂಭವಾಗಿದ್ದು ಕ್ಷೇತ್ರಮಟ್ಟದಲ್ಲಿ ಸಂಚರಿಸಲಿದೆ ಎಂದರು.
ಹತ್ತಾರು ಮಾರಕ ಅರಣ್ಯ ಕಾಯ್ದೆಗಳು ಹಾಗೂ ಅವುಗಳ ಅವೈಜ್ಞಾನಿಕ ಅನುಷ್ಠಾನದಿಂದ ನಮ್ಮ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ನಾವು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಪಶ್ಚಾತ್ತಾಪ ಪಡುವ ದಿನಗಳು ದೂರವಿಲ್ಲ. ಸೆಕ್ಷನ್ 4 ಅನ್ನು ಸೆಕ್ಷನ್17 ಮಾಡುವಾಗ ಪಾಲಿಸಬೇಕಾದ ನೈಸರ್ಗಿಕ ನ್ಯಾಯಪಾಲನೆ ಮಾಡದೇ ರೈತರು ಹಾಗೂ ಕಾರ್ಮಿಕರನ್ನು ವಂಚಿಸಲಾಗುತ್ತಿದೆ. ಈಗಾಗಲೇ ರಚಿತಗೊಂಡ ಎಸ್‌ಐಟಿ ನಮ್ಮನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದ್ದು, ದಾಖಲೆ ಇರುವ ಭೂಮಿಗೂ ಕುತ್ತು ಬರಲಿದೆ. ಕಾಡಾನೆ ದಾಳಿಗೆ ರೈತರು ಹೆದರಿ ಕೃಷಿ ತೋಟಕ್ಕೆ ಹೋಗುವುದನ್ನು ಬಿಟ್ಟಿದ್ದಾರೆ. ಈ ಸಮಸ್ಯೆಗಳಿಗೆ ನಮ್ಮನ್ನು ಅಳುವ ಜನಪ್ರತಿನಿಧಿಗಳು ಪರಿಹಾರ ನೀಡಬೇಕಿದೆ. ನಾವು ನಮ್ಮ ಹಕ್ಕುಗಳನ್ನು ಕೇಳಲು ಹಿಂಜರಿಯಬಾರದು. ನಮ್ಮ ಹಿರಿಯರು ಬದುಕಿಬಾಳಿದ ರೀತಿಯಲ್ಲಿ ನಾವು ಮುನ್ನಡೆಬೇಕು. ನೆಮ್ಮದಿ ಬಾಳು ನಮಗೆ ಸಿಗಬೇಕಾದರೆ ಗೊಂದಲದ ಗೂಡಾದ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಿದೆ ಎಂದರು.
ಸಮಿತಿ ಸದಸ್ಯರದ ಆದರ್ಶ,ಆಶ್ವಿನ್,ಸುಭಾಷ್, ಸಚಿನ್, ಸಂತೋಷ್, ಮಂಜುನಾಥ್, ರವಿ ಉಪಸ್ಥಿತರಿದ್ದರು.