ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯರು, ಶಿಕ್ಷಕರು ಸಿಬ್ಬಂದಿಯನ್ನು ಗೌರವಿಸಲಾಯಿತು 
ಚಿಕ್ಕಮಗಳೂರು

ಕೆಂಪೇಗೌಡರಿಂದ ಬೆಂಗಳೂರಿಗೆ ಜಾಗತಿಕ ಮನ್ನಣೆ

ಎನ್.ಆರ್.ಪುರ: ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ದೊಡ್ಡ ನಗರವಾಗಿ ಬೆಳೆದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಪೂರ್ವಾಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್ ಹೇಳಿದರು.
ತಾಲೂಕಿನ ಅಳಲಗೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ, ಮಕ್ಕಳಿಗೆ ರಸಪ್ರಶ್ನೆ, ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ರಸ ಪ್ರಶ್ನೆಯಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು. ಮುಂದಾಲೋಚನೆಯಿಂದ ಬೆಂಗಳೂರು ನಗರ ಕಟ್ಟಿರುವುದರಿಂದ 1 ಕೋಟಿ ಜನರಿಗೆ ನೀರು, ವಸತಿ ಸೌಕರ್ಯ ಕಲ್ಪಿಸಲು ಅನುಕೂಲವಾಗಿದೆ. ಮಕ್ಕಳು ದಿನಪತ್ರಿಕೆ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಮಕ್ಕಳಲ್ಲಿ ಜ್ಞಾನ, ಕೌಸಲ್ಯ ತಿಳಿಯಲಿದೆ ಎಂದರು.
ಸಮಾಜ ಸೇವಕಿ ಜುಬೇದ ಮಾತನಾಡಿ, ಕೆಂಪೇಗೌಡರು ಅವರ ಕಸುಬಿಗೆ ತಕ್ಕ ಹಾಗೆ ಪೇಟೆಗಳನ್ನು ನಿರ್ಮಿಸಿದ್ದರು. ಇಂದು ಬೆಂಗಳೂರು ಸಿಲಿಕಾನ್ ಸಿಟಿ ಎಂಬ ಹೆಸರು ಪಡೆಯಲು ಕೆಂಪೇಗೌಡರ ದೂರ ದೃಷ್ಠಿಯೇ ಕಾರಣ. ದೇಶದ ಬೇರೆ ನಗರಕ್ಕಿಂತ ಬೆಂಗಳೂರಿನಲ್ಲೇ ಐಟಿ, ಬಿಟಿ ಕಂಪನಿಗಳು ಹೆಚ್ಚಾಗಿ ನೆಲೆಸಿದೆ ಎಂದರು.
ವಿದ್ಯಾರ್ಥಿಗಳಿಗೆ ನಾಡಪ್ರಭು ಕೇಂಪೇಗೌಡರ ಆದರ್ಶ ಆಡಳಿತ ಮತ್ತು ಜೀವನ ಚರಿತ್ರೆ ಬಗ್ಗೆ ರಸಪ್ರಶ್ನೆ ನಡೆಯಿತು. ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಚಾರ್ಯರು ಶಿಕ್ಷಕರು, ಸಿಬ್ಬಂದಿಗಳನ್ನು ಗೌರವಿಸಲಾಯಿತು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ದ್ವಾರಮಕ್ಕಿ ಸತೀಶ್, ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯೆ ಪೂರ್ಣಿಮ, ಕಸಾಪ ಯುವ ಘಟಕದ ಅಧ್ಯಕ್ಷೆ ಸುಷ್ಮಾ ಗಂಗಾಧರ್, ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್, ಶಿಕ್ಷಕ ರಾಮಮೋಹನ್,ಅಭಿಜ್ಞಾ ಇದ್ದರು.