ಚಿಕ್ಕಮಗಳೂರು ಹೊರವಲಯದ ಸಿರಗಾಪುರದ ಶ್ರೀ ಸಾಯಿ ಏಂಜಲ್ಸ್ ಪದವಿ ಪೂರ್ವ ಕಾಲೇಜಿನ ಶ್ರೀ ಸಾಯಿ ಶಂಕರಾಚಾರ್ಯ ಸಭಾಂಗಣದಲ್ಲಿ ೨೭ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಯೋಧ ನಮನ ಕಾರ್ಯಕ್ರಮ ನಡೆಸಲಾಯಿತು. ಹಾನರರಿ ಕ್ಯಾಪ್ಟನ್ ಸಿ.ಎಸ್.ಮಂಜುನಾಥ್, ಕೆ.ಕೆ.ನಾಗರಾಜ್, ಅನಿಲ್ ಕುಮಾರ್, ಶ್ರೀಧರ್ಮಪ್ರಸಾದ್, ಭವ್ಯ, ಮಹಾಲಕ್ಷ್ಮೀ ಮತ್ತಿತರರಿದ್ದರು. 
ಚಿಕ್ಕಮಗಳೂರು

ಪಾಕಿಸ್ತಾನದ ಕುತಂತ್ರದ ಫಲವೇ ಕಾರ್ಗಿಲ್ ಯುದ್ಧ

ಚಿಕ್ಕಮಗಳೂರು: ಪಾಕಿಸ್ತಾನದ ಹಿಂದಿನ ಸೇನಾ ಜನರಲ್ ಆಗಿದ್ದ ಪರ್ವೇಜ್ ಮುಶ್ರಫ್ ಮತ್ತುವರ ಸಹೋದ್ಯೋಗಿಗಳ ಸೇಡು ಹಾಗೂ ಪಾಕಿಸ್ತಾನದ ಕುತಂತ್ರದ ಫಲದಿಂದಾಗಿಯೇ ಕಾರ್ಗಿಲ್ ಯುದ್ಧ ನಡೆಯಿತು. ಆದರೆ ನಮ್ಮ ಸೈನಿಕರ ಎದುರು ಪಾಕಿಸ್ತಾನ ಹೀನಾಯವಾಗಿ ಸೋಲನುಭವಿಸಿತು ಎಂದು ಹಾನರರಿ ಕ್ಯಾಪ್ಟನ್ ಸಿ.ಎಸ್.ಮಂಜುನಾಥ್ ತಿಳಿಸಿದರು.
ನಗರದ ಹೊರವಲಯದ ಸಿರಗಾಪುರದ ಶ್ರೀ ಸಾಯಿ ಏಂಜಲ್ಸ್ ಪದವಿ ಪೂರ್ವ ಕಾಲೇಜಿನ ಶ್ರೀ ಸಾಯಿ ಶಂಕರಾಚಾರ್ಯ ಸಭಾಂಗಣದಲ್ಲಿ ೨೭ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಯೋಧ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಭಾರತೀಯ ಸೈನ್ಯದ ತ್ಯಾಗ, ಬಲಿದಾನ ಹಾಗೂ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದ ಮಂಜುನಾಥ್ ಅವರು ಪ್ರಪಂಚದ ಯುದ್ಧ ಇತಿಹಾಸದಲ್ಲಿ ಭಾರತೀಯ ಯೋಧರು ಪಾಲ್ಗೊಂಡ ಕಾರ್ಗಿಲ್, ಧ್ರಾಸ್. ಟೋಲಲಿಂಗ್, ಟೈಗರ್ ಹಿಲ್ಸ್, ಸಿಯಾಚಿನ್ ಕಾರ್ಯಾಚರಣೆಗಳು ಒಂದು ಮಹತ್ತರ ಮೈಲಿಗಲ್ಲು ಎಂದು ಬಣ್ಣಿಸಿದರು.
ದುರ್ಗಮ ಸನ್ನಿವೇಶ ,ಅಸಾಧ್ಯ ಪರಿಸ್ಥಿತಿಗಳು, ಹವಾಮಾನದ ವೈಪರಿತ್ಯ, ಆಯಕಟ್ಟಿನ ಜಾಗದ ಶತ್ರುಗಳ ಕಾರ್ಯಯೋಜನೆಯ ಮುಂದೆ ಕಾರ್ಗಿಲ್ ಯುದ್ಧದ ವೇಳೆ ಭಾರತೀಯ ಸೈನಿಕ ಹೋರಾಡಬೇಕಾಗಿತ್ತು. ಅಂತಹ ಸಂದರ್ಭದಲ್ಲಿ ಸೈನ್ಯವನ್ನು ಮುನ್ನಡೆಸಿದ ಸೈನ್ಯದ ನಾಯಕತ್ವ ಮತ್ತು ರಾಷ್ಟçದ ನಾಯಕತ್ವಗಳೆರಡು ಸಮರ್ಥವಿದ್ದುದು ಆಪರೇಷನ್ ವಿಜಯದ ಯಶಸ್ಸಿಗೆ ಕಾರಣವಾಯಿತು ಎಂದು ಹೇಳಿದರು.
ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳು ಹಾಗೂ ಕೊಲ್ಲಿ ದೇಶಗಳ ಯುದ್ಧಗಳು ಬೇಕಾದಷ್ಟು ಪಾಠಗಳನ್ನ ಕಲಿಸಿವೆಯಾದರೂ ಆಪರೇಷನ್ ವಿಜಯ್ ಮತ್ತು ಆಪರೇಷನ್ ಸಫೇತ್ ಸಾಗರ್ ಕಾರ್ಯಾಚರಣೆಗಳು ಮುಂದಿನ ತಲೆಮಾರುಗಳವರೆಗೂ ನೆನಪಿರುತ್ತವೆ ಎಂದು ವಿವರಿಸಿದರು.
ಪಾಕಿಸ್ತಾನದ ವಿಶ್ವಾಸದ್ರೋಹತನ, ಚೀನಾದ ಕುತಂತ್ರ, ಅಮೇರಿಕಾದ ಪಾಕಿಸ್ತಾನ ಪರ ನೀತಿ ಇವೆಲ್ಲವುಗಳನ್ನು ಭಾರತ ಸಮರ್ಥವಾಗಿ ನಿಭಾಯಿಸಿದ್ದನ್ನು ನಾವೆಲ್ಲರೂ ಸ್ಮರಿಸಿದರು. ಭಾರತೀಯ ಯೋಧರ ನಿಷ್ಠೆ, ಶಿಸ್ತು , ತ್ಯಾಗ, ಪರಾಕ್ರಮಕ್ಕೆ ಅವರಿಗೆ ಅವರೇ ಸಾಟಿ ಎಂದು ಹೇಳಿದರು.
ಭಾರತದ ಕ್ಷಿಪಣಿ ಮನುಷ್ಯ ಎಪಿಜೆ ಅಬ್ದುಲ್ ಕಲಾಂ ಅವರಂಥ ರಾಷ್ಟ್ರ ಭಕ್ತ ವಿಜ್ಞಾನಿ, ಬಾಂಗ್ಲಾ ವಿಮೋಚನ ಸಮಯದಲ್ಲಿ ಕಾರ್ಯನಿರ್ವಹಿಸಿದ ಜನರಲ್ ಸ್ಯಾಮ್ ಮಾಣಿಕ್ ಷಾ ಅವರಂಥ ನಾಯಕತ್ವ ಮತ್ತೆಲ್ಲಿಯೂ ಕಾಣಲಾಗದು. ವಿದ್ಯಾರ್ಥಿಗಳು ಚರಿತ್ರೆಯಿಂದ ಪಾಠ ಕಲಿಯಬೇಕು ಎಂದು ತಿಳಿಸಿದರು.
ಎನ್‌ಡಿಎ, ಅಗ್ನಿ ವೀರ, ಎಸ್‌ಎಸ್‌ಸಿ ಮೂಲಕವೂ ವಿವಿಧ ಆಯ್ಕೆಗಳೊಂದಿಗೆ ಭಾರತೀಯ ಮೂರು ಸೇನೆಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶಗಳು ವಿದ್ಯಾರ್ಥಿ ಸಮುದಾಯದ ಮುಂದೆ ಇದೆ. ಉತ್ತಮ ವ್ಯಕ್ತಿತ್ವ ಮತ್ತು ರಾಷ್ಟç ಸೇವೆ ಎರಡನ್ನೂ ಮೈಗೂಡಿಸಿಕೊಳ್ಳುವ ಅವಕಾಶ ಸೈನ್ಯದಲ್ಲಿದೆ. ಹೀಗಾಗಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸೈನ್ಯಕ್ಕೆ ಸೇರುವಂತಾಗಲಿ ಎಂದು ಆಶಿಸಿದರು.
ಕಾಲೇಜು ಪ್ರಾಚಾರ್ಯ ಕೆ.ಕೆ.ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಮಾನಸ ದೇಶಭಕ್ತಿ ಗೀತೆ ಹಾಡಿದರು. ಪ್ರಮುಖರಾದ ಭವ್ಯ, ಶ್ರೀಧರ್ಮಪ್ರಸಾದ್, ಅನಿಲ್ ಕುಮಾರ್. ಮಹಾಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.