ಚಿಕ್ಕಮಗಳೂರು ರತ್ನಗಿರಿ ರಸ್ತೆಯ ಭುವನೇಂದ್ರ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಮೂರು ದಿನಗಳ ಕನ್ನಡ ಮತ್ತು ಹಿಂದಿ ಚಲನಚಿತ್ರ ಗೀತೆಗಳ ಕರೋಕೆ ಗಾಯನ ತರಬೇತಿ ಶಿಬಿರ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
ಚಿಕ್ಕಮಗಳೂರು: ನಗರದ ರತ್ನಗಿರಿ ರಸ್ತೆಯ ಭುವನೇಂದ್ರ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಮೂರು ದಿನಗಳ ಕನ್ನಡ ಮತ್ತು ಹಿಂದಿ ಚಲನಚಿತ್ರ ಗೀತೆಗಳ ಕರೋಕೆ ಗಾಯನ ತರಬೇತಿ ಶಿಬಿರ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಸಂಗೀತಾಸಕ್ತರಿಂದ ಉತ್ತಮ ಸ್ಪಂದನೆ ಪಡೆದ ಈ ಶಿಬಿರವು ಕಲಿಕಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ವೇದಿಕೆಯಾಗಿ ರೂಪುಗೊಂಡಿತು.
ಶಿಬಿರದಲ್ಲಿ `ಮಧುಮಾಸ ಚಂದ್ರಮ’, `ಇನ್ನೂನು ಬೇಕಾಗಿದೆ`, `ತುಂತುರು ಅಲ್ಲಿ ನೀರ ಹಾಡು’, `ಅಜೀಬ್‌ದಾಸ್ತಾನ್’, `ಕುಣಿದು ಕುಣಿದು ಬಾರೆ’ ಸೇರಿದಂತೆ ಹಲವು ಜನಪ್ರಿಯ ಗೀತೆಗಳನ್ನು ಸುಲಭವಾಗಿ ಕಲಿಯುವ ರೀತಿಯಲ್ಲಿ ತರಬೇತಿ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಶಿಶುನಾಳ ಶರೀಫರ ಸಾಹಿತ್ಯಕ್ಕೆ ಸಿ.ಅಶ್ವಥ್ ಅವರ ಸಂಗೀತ ಸಂಯೋಜನೆಯ `ಕೋಡಗನ ಕೋಳಿ ನುಂಗಿತ್ತ’ ಭಾವಗೀತೆಯನ್ನು ಶಿಬಿರಾರ್ಥಿಗಳು ಅತ್ಯಂತ ಭಾವಪೂರ್ಣವಾಗಿ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ತೆರೆ ಎಳೆಯಲಾಯಿತು.
ಮೂರು ದಿನಗಳಲ್ಲೂ ಸಮಯಕ್ಕೆ ಸರಿಯಾಗಿ ಆರಂಭವಾಗಿ ಅಚ್ಚುಕಟ್ಟಾಗಿ ನಡೆಯುತ್ತಿದ್ದ ಶಿಬಿರ ಸ್ಪರ್ಧಾಕಾಂಕ್ಷಿಗಳ ಹುರುಪಿಗೆ ಸಾಕ್ಷಿಯಾಗಿತ್ತು. ಶಿಬಿರಾರ್ಥಿಗಳಿಗೆ ಶ್ರುತಿ, ತಾಳ, ಲಯ, ಉಚ್ಚಾರಣೆಯ ಜೊತೆಗೆ ಹಾಡನ್ನು ಭಾವನಾತ್ಮಕವಾಗಿ ಹೇಗೆ ಹಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು. ಸಂಗೀತದ ಬಗ್ಗೆ ಪೂರ್ವಜ್ಞಾನವಿಲ್ಲದ ಅನೇಕರು ಕೇವಲ ಕಲಿಯುವ ಆಸಕ್ತಿಯಿಂದ ಭಾಗವಹಿಸಿ ಗಮನಾರ್ಹ ಪ್ರಗತಿ ಸಾಧಿಸಿದರು. ಮಕ್ಕಳು, ಯುವಕರು ಹಾಗೂ ಹಿರಿಯರು ಸೇರಿದಂತೆ ಎಲ್ಲಾ ವಯೋಮಾನದವರು ಒಟ್ಟಾಗಿ ಹಾಡಿದ ಕ್ಷಣಗಳು ಎಲ್ಲರ ಮನಸ್ಸನ್ನು ಸ್ಪರ್ಶಿಸಿದವು. ಸಂಗೀತಾಸಕ್ತರಲ್ಲಿ ಉತ್ಸಾಹ ಮೂಡಿಸಿ ಸಂಗೀತ ಕ್ಷೇತ್ರದಲ್ಲಿ ವಿಶೇಷ ಪ್ರಯೋಗದ ಹೊಸಛಾಪು ಮೂಡಿಸಿದವು.
ರಾಯ ನಾಯಕ್ ಅವರ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ ದರ್ಶನ್ ಹಾಗೂ ಪಂಚಮಿ ಅವರು ತರಬೇತಿಯಲ್ಲಿ ಕೈಜೋಡಿಸಿ, ಶಿಬಿರಾರ್ಥಿಗಳಿಗೆ ಆತ್ಮವಿಶ್ವಾಸದಿಂದ ಹಾಡಲು ಪ್ರೋತ್ಸಾಹ ನೀಡಿದರು. ಅವರ ಮಾರ್ಗದರ್ಶನದಿಂದ ಕಲಿಕೆಯ ವಾತಾವರಣ ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿಬಂತು.
ಕಾರ್ಯಕ್ರಮದಲ್ಲಿ ನರೇಂದ್ರ ಪೈ ದಂಪತಿ, ಜ್ಯೋತಿ ಪ್ರಕಾಶ್ ಪೈ, ನಂದಿನಿ ಕಾಮತ್, ಪ್ರತಿಮಾ ಪೈ, ನಾಗರಾಜರಾವ್ ಕಲ್ಕಟ್ಟೆ ದಂಪತಿ, ದೇವರಾಜ್ ಶೆಟ್ಟಿ ದಂಪತಿ, ಬಲೀಂದ್ರ ಶೆಟ್ಟಿ ದಂಪತಿ, ಮಮತಾ ನಾಯಕ್, ದರ್ಶನ್, ಪಂಚಮಿ, ರೂಪ ನಾಯಕ್, ಮಮತಾ ಬಾಳಿಗಾ ಹಾಗೂ ಇತರರು ಸಕ್ರಿಯವಾಗಿ ಸಹಕರಿಸಿ ಶಿಬಿರದ ಯಶಸ್ಸಿಗೆ ಕಾರಣರಾದರು.
ಸಮಾರೋಪದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊAಡ ಶಿಬಿರಾರ್ಥಿಗಳು, ವೇದಿಕೆಯಲ್ಲಿ ಮೊದಲ ಬಾರಿಗೆ ಮೈಕ್ ಹಿಡಿದು ಆತ್ಮವಿಶ್ವಾಸದಿಂದ ಹಾಡುವ ಅವಕಾಶ ದೊರೆತಿದ್ದು ಜೀವನದ ಸ್ಮರಣೀಯ ಅನುಭವ. ಚಿಕ್ಕಮಗಳೂರಿನಲ್ಲಿ ಇಂತಹ ವಿಶಿಷ್ಟ ಕರೋಕೆ ಗಾಯನ ತರಬೇತಿ ಶಿಬಿರವನ್ನು ಆಯೋಜಿಸಿರುವುದು ಅತ್ಯಂತ ಸಂತೋಷ ತಂದಿದೆ. ರಾಯ ನಾಯಕ್ ಅವರ ನೇತೃತ್ವದಲ್ಲಿ ಇಂತಹ ಇನ್ನಷ್ಟು ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು.