ಗುಂಡಿಮಯವಾಗಿರುವ ಕಳಸ ಹೊರನಾಡು ಮುಖ್ಯ ರಸ್ತೆ. 
ಚಿಕ್ಕಮಗಳೂರು

ಕಳಸ, ಹೊರನಾಡಿಗೆ ಬರುವ ಪ್ರವಾಸಿಗರಿಗೆ ಗುಂಡಿಗಳ ಸ್ವಾಗತ

ಕಳಸ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ಸಾವಿರಾರು ಭಕ್ತರ ಆರಾಧ್ಯ ದೈವ ಶ್ರೀ ಅನ್ನಪೂರ್ಣೇಶ್ವರಿ ದೇವಿ ನೆಲೆಸಿರುವ ಹೊರನಾಡಿಗೆ ಬರಬೇಕಾದರೆ ಭಕ್ತರು ಮೊದಲು ದೇವಿ ದರ್ಶನಕ್ಕಿಂತ ಹೆಚ್ಚಾಗಿ ಸಾವಿರಾರು ರಸ್ತೆ ಗುಂಡಿಗಳ ದರ್ಶನ ಮಾಡಬೇಕಿದೆ!.
ಕಳಸ ಪಟ್ಟಣಕ್ಕೆ ಬರುತ್ತಿದ್ದಂತೆ ವಾಹನ ಸವಾರರು, ಪ್ರವಾಸಿಗರನ್ನು ಸ್ವಾಗತಿಸುವುದು ಸ್ವಾಗತ ಗೋಪುರವಲ್ಲ, ಬದಲಿಗೆ ಸಾಲು ಸಾಲು ಬೃಹತ್ ಗುಂಡಿಗಳು. ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯುದ್ದಕ್ಕೂ ಎಣಿಕೆಗೂ ಸಿಗದಷ್ಟು ಹೊಂಡಗಳು ನಿರ್ಮಾಣವಾಗಿವೆ. ಈ ಮಾರ್ಗದಲ್ಲಿ ಪ್ರಯಾಣಿಸುವುದು ಭಕ್ತರಿಗೆ ಹಾಗೂ ಸ್ಥಳೀಯರಿಗೆ ನಿತ್ಯ ನರಕಯಾತನೆಯಾಗಿ ಪರಿಣಮಿಸಿದೆ.
ಹೊರನಾಡು ರಸ್ತೆಯ ಪಂಚಾಯಿತಿ ಸಮೀಪದ ರಸ್ತೆಯ ಸ್ಥಿತಿಯಂತೂ ಹೇಳತೀರದಾಗಿದೆ. ರಸ್ತೆಯಲ್ಲಿ ಇಷ್ಟು ದೊಡ್ಡ ಮಟ್ಟದ ಹೊಂಡಗಳು ಬಿದ್ದಿರುವುದನ್ನು ಕಂಡು ಸ್ಥಳೀಯ ಗ್ರಾಮಸ್ಥರು ಈ ಭಾಗಕ್ಕೆ ಗುಂಡಿಗ್ರಾಮ ಎಂದೇ ವ್ಯಂಗ್ಯವಾಗಿ ನಾಮಕರಣ ಮಾಡಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ರಾಜ್ಯಹಾಗೂ ಹೊರ ರಾಜ್ಯಗಳಿಂದ ನಿತ್ಯ ಸಾವಿರಾರು ವಾಹನಗಳು, ಪ್ರವಾಸಿಗರು ಮತ್ತು ಭಕ್ತರು ಆಗಮಿಸುವ ಇಂತಹ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರದ ರಸ್ತೆ ಈ ಮಟ್ಟಕ್ಕೆ ತಲುಪಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ದೂರದ ಊರುಗಳಿಂದ ಹೊರನಾಡಿಗೆ ಬರುವ ಭಕ್ತರು, ನಾವು ಈ ಊರಿಗೆ ಭಕ್ತಿಯಿಂದ ಬರುತ್ತೇವೆ. ಆದರೆ ಇಲ್ಲಿನ ರಸ್ತೆಯ ಪರಿಸ್ಥಿತಿ ನೋಡಿದರೇ ನಾವು ಇಲ್ಲಿಗೆ ಇಷ್ಟು ಕಷ್ಟಪಟ್ಟು ಬರಬೇಕಾ ಎನಿಸುತ್ತದೆ. ಕಳಸಕ್ಕೆ ಬಂದ ಮೇಲೆ ಹೆಚ್ಚು ಹೊಂಡಗಳ ದರ್ಶನವಾಗುತ್ತಿದೆ. ಇಲ್ಲಿಯ ಶಾಸಕರು ಯಾರು ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.