ಕಡೂರಿನ ರೋಟರಿ ಕ್ಲಬ್ ಸಭಾಂಗಣದಲ್ಲಿ ಪತ್ರಕರ್ತ ಪ್ರಕಾಶ್ ಮೂರ್ತಿ ಮತ್ತು ದೇವರಾಜ್ ಅವರನ್ನು ಸನ್ಮಾನಿಸಲಾಯಿತು.
ಕಡೂರು: ಸಾಮಾಜಿಕ ಸ್ವಾಸ್ಥ್ಯಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಆರ್.ಜಿ.ಕೃಷ್ಣಸ್ವಾಮಿ ಹೇಳಿದರು.
ರೋಟರಿ ಕ್ಲಬ್ ಸಭಾಂಗಣದಲ್ಲಿ ರೋಟರಿ ಕ್ಲಬ್ನಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರಿ ತಪ್ಪುಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ನಾಲ್ಕನೇ ಆಧಾರ ಸ್ತಂಭವಾಗಿ ಮಾಧ್ಯಮ ಕಾರ್ಯನಿರ್ವಹಿಸುತ್ತಿದೆ. ಸಂಘ ಸಂಸ್ಥೆಗಳ ಮೂಲಕ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಮಾಧ್ಯಮದ ಪ್ರೋತ್ಸಾಹ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಯಿಂದ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಪತ್ರಕರ್ತರನ್ನು ಗೌರವಿಸಲಾಗಿದೆ ಎಂದರು.
ವಕೀಲ ಟಿ.ಗೋವಿಂದ ಸ್ವಾಮಿ ಕಾನೂನು ಪಾತ್ರಗಳ ಕುರಿತು ಮಾತನಾಡಿ, ಕಾನೂನಿನ ವ್ಯಾಪ್ತಿ ವಿಶಾಲವಾಗಿದೆ. ನಮ್ಮಗಳ ದೈನಂದಿನ ಬದುಕಿನಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಕಾನೂನು ನಿರ್ಧರಿಸುತ್ತದೆ. ನಾವೆಲ್ಲರೂ ನಮ್ಮ ನೆಲದ ಕಾನೂನನ್ನು ಗೌರವಿಸಬೇಕಿದೆ. ಸಂವಿಧಾನದ ಅಡಿಯಲ್ಲಿ ಕಾನೂನಿನ ನಿಯಮ ಜನರ ಹಕ್ಕುಗಳನ್ನು ಅನಗತ್ಯವಾಗಿ ಉಲ್ಲಂಘಿಸದೆ ಅವರ ಅಗತ್ಯಗಳನ್ನು ಪೂರೈಸುತ್ತದೆ ಎಂದರು.
ಹಿರಿಯ ಪತ್ರಕರ್ತ ಎ.ಜೆ.ಪ್ರಕಾಶ್ ಮೂರ್ತಿ ಮಾತನಾಡಿ, ಪತ್ರಿಕೆಗಳನ್ನು ಉಳಿಸಿ ಬೆಳೆಸುವುದು ಓದುಗರ ಕೈಯಲ್ಲಿದೆ. ಹಿಂದೆ ಪತ್ರಿಕೆಗಳೇ ಮುಖ್ಯವಾಹಿನಿಯಲ್ಲಿದ್ದವು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಹಾವಳಿಯಿಂದ ಕ್ಷಣ ಮಾತ್ರದ ಸುದ್ದಿಗಳು ಪ್ರಚಲಿತವಾಗುತ್ತಿವೆ. ವಸ್ತು ನಿಷ್ಠ ವರದಿಗಳಿಗೆ ಹೆಚ್ಚು ಮನ್ನಣೆ ನೀಡಿ ಪತ್ರಿಕೆಗಳ ಬೆಳವಣಿಗೆಗೆ ಎಲ್ಲರ ಪ್ರೋತ್ಸಾಹ ಅತ್ಯಗತ್ಯ ಎಂದರು.
ಹಿರಿಯ ವಕೀಲ ಬಿ.ಶಿವಕುಮಾರ್, ಕಾರ್ಯದರ್ಶಿ ಗೋಪಾಲಕೃಷ್ಣ, ಅಣ್ಣಪ್ಪ, ಕೆ.ಎಚ್.ಮಂಜುನಾಥ್, ಎಚ್.ಬಿ.ಹರೀಶ್,ವಡೇರಹಳ್ಳಿ ಅಶೋಕ್, ಸೂರಿ ಶ್ರೀನಿವಾಸ್, ಟಿ.ಡಿ.ರಾಜನ್, ಮಂಜುನಾಥ್, ಶ್ರೀನಿವಾಸ್ ಮತ್ತಿತರಿದ್ದರು.