ಕೊಪ್ಪ: ವಿವಿಧ ಬೇಡಿಕೆ ಈಡೇರಿಕೆಗಾಗಿ ಜು.21ರಂದು ಶೃಂಗೇರಿ ಕ್ಷೇತ್ರದ ಮೂರು ತಾಲೂಕು ಕಚೇರಿ ಎದುರು ಆಯೋಜಿಸಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಜೆಡಿಎಸ್ ಕ್ಷೇತ್ರ ಸಂಚಾಲಕ ಎಚ್.ಎಸ್.ಕಳಸಪ್ಪ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧವಾ ವೇತನ, ವೃಧ್ಯಾಪ ವೇತನ, ಅಂಗವಿಕಲ ವೇತನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಸುಧಾಕರ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ನಿಧನದಿಂದ ತಾತ್ಕಾಲಿಕವಾಗಿ ಪ್ರತಿಭಟನೆ ಮುಂದೂಡಲಾಗಿದೆ ಎಂದರು.
ಸರ್ಕಾರ ಬಿಪಿಎಲ್ ಕಾರ್ಡ್‌ದಾರರಿಗೆ ಸಿಗುವ ಸವಲತ್ತುಗಳನ್ನು ನಿಲ್ಲಿಸಬಾರದು. ಬಡತನ ರೇಖೆಗಿಂತ ಕೆಳಗಿನವರಿಗೆ ಮತ್ತೆ ಆದಾಯ ದೃಢೀಕರಣ ಪತ್ರ ಕೇಳುವುದು ಸರಿಯಲ್ಲ. ಅವರಿಗೆ ಎಲ್ಲ ಯೋಜನೆಗಳಿಗೂ ಬಿಪಿಎಲ್ ಕಾರ್ಡ್ ಮಾನದಂಡವಾಗಬೇಕು. ಬಡವರಿಗೆ ಆಗುವ ಅನ್ಯಾಯದ ವಿರುದ್ಧ ಹೋರಾಟ ಅನಿವಾರ್ಯ. ನಮ್ಮ ನಾಯಕರು ಗೊತ್ತುಪಡಿಸಿದ ದಿನಾಂಕದಂದು ಪ್ರತಿಭಟನೆ ಆಯೋಜಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಕಗ್ಗಾ ರಾಮಸ್ವಾಮಿ ಮಾತನಾಡಿ, ಸರ್ಕಾರ ಬಡವರಿಗೆ ಕೊಡುವ ಸವಲತ್ತು ಕಡಿತಗೊಳಿಸಲು ಮುಂದಾಗಿದೆ. ಆದಾಯ ದೃಢೀಕರಣ ಪತ್ರ ಕೇಳುವ ಮೂಲಕ ಸವಲತ್ತು ಕಡಿತಗೊಳಿಸುತ್ತಿದೆ ಎಂದು ದೂರಿದರು.
ಜೆಡಿಎಸ್ ಮಾಧ್ಯಮ ಸಲಹೆಗಾರ ಎಚ್.ಕೆ.ವಿಶ್ವ ಮಾತನಾಡಿ,ವೃದ್ಧಾಪ್ಯ ವೇತನಕ್ಕೆ ವ್ಯಾಸಂಗ ದೃಡೀಕರಣ ಕೇಳುವುದು ಫಲನುಭವಿಗಳನ್ನು ಯೋಜನೆಯಿಂದ ಕಡಿತಗೊಳಿಸುವ ಉದ್ದೇಶ. ಈ ಹಿಂದೆ ಶಾಲೆಗಳಿಗೆ ಹೋಗದವರೇ ಹೆಚ್ಚು ಮಂದಿ ಇದ್ದಾರೆ. ಅವರು ವ್ಯಾಸಂಗ ದೃಢೀಕರಣ ಪತ್ರ ಎಲ್ಲಿಂದ ತಂದು ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಮುಖಂಡರಾದ ಪೂರ್ಣೇಶ್, ವಿಕ್ರಂ, ಕೃಷ್ಣ ಶೆಟ್ಟಿ, ಗುರುಮೂರ್ತಿ ಇದ್ದರು.