ಎನ್.ಆರ್.ಪುರದಲ್ಲಿ ಹಲಸು, ಮಾವಿನ ಮೇಳವನ್ನು ಕಣಿವೆ ವಿನಯ್ ಉದ್ಘಾಟಿಸಿದರು. ಡಾ. ಕೆ.ಪಿ.ಅಂಶುಮಂತ್, ವಿದ್ಯಾ ನಂದಕುಮಾರ್, ಎಲ್.ಎಂ.ಸತೀಶ್, ಇ.ಸಿ.ಜೋಯಿ, ಲೋಕೇಶ್ ಗೌಡ ಇದ್ದರು.
- ಹಲಸು, ಮಾವಿನ ಮೇಳ
- ಮಲೆನಾಡಿನ ಭಾಗದಲ್ಲಿ
ಎನ್.ಆರ್.ಪುರ: ಹಲಸಿನ ಮೇಳ ಆಯೋಜಿಸುವುದರಿಂದ ಹಣ್ಣಿನ ವಿವಿಧ ಉಪಯೋಗಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ತಿಳಿಸಿದರು.
ರೋಟರಿ ಕ್ಲಬ್ ಹಾಗೂ ಟೀಮ್ ಕುಂದಾಪುರ ಆಶ್ರಯದಲ್ಲಿ ಆಯೋಜಿಸಿದ್ದ ಹಲಸು, ಮಾವಿನ ಮೇಳ ಉದ್ಘಾಟಿಸಿ ಮಾತನಾಡಿದರು. ಹಲಸಿನ ಹಣ್ಣು ಆರೋಗ್ಯ ವೃದ್ಧಿಗೆ ಪೂರಕ. ಮೇಳ ಆಯೋಜಿಸಿರುವುದರಿಂದ ಹಲಸು ಮತ್ತು ಮಾವಿನ ಹಣ್ಣಿನ ರುಚಿ ಸವಿಯುವುದರ ಜತೆಗೆ ಉಪಯೋಗ ತಿಳಿದುಕೊಳ್ಳಲು ಸಾಧ್ಯ ಎಂದರು.
ರೋಟರಿ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ, ಮಲೆನಾಡಿನ ಭಾಗದಲ್ಲಿ ಹಲಸು ಇತ್ತೀಚಿನವರೆಗೂ ಕಾಡಿನ ಬೆಳೆಯಾಗಿದ್ದಲ್ಲದೆ ಹಣ್ಣನ್ನು ಮಾರಾಟ ಮಾಡುತ್ತಿರಲಿಲ್ಲ. ಪುತ್ತೂರು ಭಾಗದಲ್ಲಿ ರೈತರು ಸಹಕಾರ ಸಂಘಗಳ ಮೂಲಕ ಹಲಸನ್ನು ಮುಖ್ಯ ಬೆಳೆಯಾಗಿ ಬೆಳೆದು ರಪ್ತು ಮಾಡುತ್ತಿದ್ದಾರೆ. ಅರಬ್ ದೇಶದಲ್ಲಿ ಹಲಸಿನ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. ಹಲಸಿನ ಹಣ್ಣಿನಿಂದ ಹೋಳಿಗೆ, ಕಬಾಬ್, ಹಲ್ವ, ಜಿಲೇಬಿ ತಯಾರಿಸಲಾಗುತ್ತಿದ್ದು, ಇವುಗಳನ್ನು ಪರಿಚಯಿಸುವ ಉದ್ದೇಶದಿಂದ ಹಲಸು ಮತ್ತು ಮಾವಿನ ಮೇಳ ಆಯೋಜಿಸಲಾಗಿದೆ ಎಂದರು.
ಹಲಸಿನಿಂದ ತಯಾರಿಸಿದ ಜಿಲೇಬಿ, ಹಪ್ಪಳ, ಹೋಳಿಗೆ, ಚಿಪ್ಸ್, ಹಲಸಿನ ಹಣ್ಣು, ಗಿಡಗಳನ್ನು ಮಾರಾಟಕ್ಕೆ ಇಡಲಾಗಿತ್ತು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ರೋಟರಿ ಕಾರ್ಯದರ್ಶಿ ಕಟಗಳಲೆ ಲೋಕೇಶ್ ಗೌಡ, ನಿಯೋಜಿತ ಅಧ್ಯಕ್ಷ ವಿದ್ಯಾ ನಂದಕುಮಾರ್ ಇದ್ದರು.