ಓಣಿತೋಟ ರತ್ನಾಕರ್ 
ಚಿಕ್ಕಮಗಳೂರು

ಶಾಲೆಯಲ್ಲಿ ರಾಜಕಾರಣ ಮಾಡುವುದು ಸಲ್ಲ

ಕೊಪ್ಪ: ಶಾಲೆಗೆ ದಾನ ಕೊಡುವುದು ತಪ್ಪಲ್ಲ, ಕೊಡಬಾರದೂ ಎಂದು ನಾನು ಎಲ್ಲಿಯೂ ಹೇಳಿಲ್ಲ.ದಾನ ಕೊಡುವ ಹೆಸರಲ್ಲಿ ರಾಜಕೀಯ ಕಾರ್ಯಕ್ರಮ ಮಾಡುವುದು ತಪ್ಪು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್ ಹೇಳಿದರು.
ಗದ್ದೆಮನೆ ವಿಶ್ವನಾಥ್ ಒಬ್ಬರೇ ಕೊಡುವುದು ತಪ್ಪಲ್ಲ. ರಾಜಕೀಯ ಮುಖಂಡ ರಾಮಸ್ವಾಮಿ ಅವರನ್ನು ಸೇರಿಸಿಕೊಂಡು ಕಾರ್ಯಕ್ರಮ ಮಾಡಿ ಶಾಲಾ ಮಕ್ಕಳಿಗೆ ಪರಿಕರ ಕೊಡುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾನು ಅಂಟಿಗೆ ಪಂಟಿಗೆ ಕಾರ್ಯಕ್ರಮ ಮಾಡಲು ಗದ್ದೆಮನೆ ವಿಶ್ವನಾಥ ಅವರ ಬಳಿ 2 ಲಕ್ಷ ರೂ.ಕೇಳಿದ್ದೆ ಎಂಬುದು ಸುಳ್ಳು. ನಾನು ಹಣ ಕೇಳಿದ್ದರೆ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ. ನಾನು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಅಧಿಕಾರಕ್ಕೆ ಬಂದಾಗ, ಸೋತಾಗ ಪಕ್ಷದಲ್ಲೇ ಇದ್ದೇನೆ. ಆದರೆ ರಾಮಸ್ವಾಮಿ ಅವರು, ಗೋವಿಂದೇಗೌಡ ಅವರ ಜತೆಗೆ ಜೆಡಿಎಸ್‌ನಲ್ಲಿ ಇದ್ದು, ನಂತರ ಬಿಜೆಪಿ ಸೇರಿದರು. ಅಲ್ಲಿ ಜೀವರಾಜ್ ರಾಮಸ್ವಾಮಿ ಅವರನ್ನು ದೂರ ಇಟ್ಟರು. ಈಗ ಗದ್ದೆಮನೆ ವಿಶ್ವನಾಥ್ ಜತೆಗೆ ಸೇರಿದ್ದಾರೆ ಎಂದರು.
ರಾಮಸ್ವಾಮಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿದ್ದಾಗ ಅವರಿಗೆ ಬರುತ್ತಿದ್ದ ಸಂಬಳದಲ್ಲಿ ಎಷ್ಟು ದಾನ ಮಾಡಿದ್ದರು. ಅಪೆಕ್ಸ್ ಬ್ಯಾಂಕ್ ನೇಮಕಾತಿಯಲ್ಲಿ ಬಂದ ಹಣದಿಂದ ಯಾವ ದಾನ ಕೊಟ್ಟಿದ್ದಾರೆ, ಎಷ್ಟು ಮಂದಿ ಯುವಕರಿಗೆ ಉದ್ಯೋಗ ಕೊಡಿಸಿದ್ದಾರೆ ಎಂದು ಸ್ಪಷ್ಟಪಡಿಸಲಿ.
ಕಸಬಾ ಹೋಬಳಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರಕಾಶ್ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನುಗ್ಗಿ ಮಂಜುನಾಥ್, ವಕ್ತಾರ ಸಂತೋಷ ಕುಲಾಸೋ, ಕೆಡಿಪಿ ಸದಸ್ಯ ರಾಜಶಂಕರ್, ಶೃಂಗೇರಿ ಕ್ಷೇತ್ರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ದುರ್ಗಾಚರಣ್, ತಾಲೂಕು ಘಟಕದ ಅಧ್ಯಕ್ಷ ವಿಜಯಾನಂದ ಮತ್ತಿತರರು ಇದ್ದರು.