ಬಾಳೆಹೊನ್ನೂರಿನ ಕೆಮ್ಮಣ್ಣು ಕಾಮಧೇನು ಗೋಸೇವಾ ಕೇಂದ್ರದಲ್ಲಿ ಎನ್.ರವಿಕುಮಾರ್ ಅವರನ್ನು ಗೋಶಾಲೆಯಿಂದ ಗೌರವಿಸಲಾಯಿತು. ನಾಗೇಶ್ ಆಂಗೀರಸ, ಶ್ರೀರಾಮ್ ಆಂಗೀರಸ ಇದ್ದರು.
ಬಾಳೆಹೊನ್ನೂರು: ಕೇವಲ ಭಾಷಣಗಳನ್ನು ಮಾಡುವ ಮೂಲಕ ಗೋವುಗಳ ರಕ್ಷಣೆ ಮಾಡುವುದು ಅಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.
ದೇವಗೋಡು ಗ್ರಾಮದ ಕೆಮ್ಮಣ್ಣು ಕಾಮಧೇನು ಗೋಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿ, ಹಲವರು ಗೋವುಗಳ ರಕ್ಷಣೆ ಎಂದು ಕೇವಲ ಭಾಷಣಗಳನ್ನು ಮಾಡಿ ಬೀದಿಗೆ ಬಿಡುತ್ತಾರೆ. ಇದರಿಂದ ಗೋವುಗಳ ರಕ್ಷಣೆ ಸಾಧ್ಯವಿಲ್ಲ. ಭಾಷಣದ ಬದಲು ಸಾಕಲಾಗದೆ ಬೀದಿಯಲ್ಲಿ ಬಿಟ್ಟಿರುವ ದೇಸಿ, ಮಲೆನಾಡು ಗಿಡ್ಡ ಮುಂತಾದ ತಳಿಯ ಹಸುಗಳನ್ನು ಸಾಕಿ ಸಲಹುವುದು ನಿಜವಾದ ಸೇವೆಯಾಗಿದೆ ಎಂದರು.
ಈ ನಿಟ್ಟಿನಲ್ಲಿ ಕಾಮಧೇನು ಗೋಶಾಲೆಯ ನಾಗೇಶ್ ಆಂಗೀರಸ ಸ್ವಂತ ಜಾಗದಲ್ಲಿ ಶೆಡ್ ನಿರ್ಮಿಸಿ ಗೋಸೇವೆ ಮಾಡುತ್ತಿರುವುದು ಶ್ಲಾಘನೀಯ. ಗೋಸೇವೆಗೆ ಸರ್ಕಾರದಿಂದ 10 ಎಕರೆ ಜಾಗ ದೊರೆತಲ್ಲಿ ಸಾವಿರಾರು ಗೋವುಗಳನ್ನು ಪೋಷಣೆ ಮಾಡಬಹುದು ಎಂಬ ಅವರ ದೂರದೃಷ್ಟಿತ್ವ ಅಭಿವೃದ್ಧಿಗೆ ಪೂರಕವಾಗಿದೆ. ಇವರ ಗೋವಿನ ಕಳಕಳಿಯನ್ನು ಪಶುಸಂಗೋಪನಾ ಸಚಿವರ ಗಮನಕ್ಕೆ ತರಲಾಗುವುದು. ಸೂಕ್ತ ಜಾಗ ಮತ್ತು ನೆರವು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಗೋಶಾಲೆ ವ್ಯವಸ್ಥಾಪಕ ನಾಗೇಶ್ ಆಂಗೀರಸ ಮಾತನಾಡಿ, ದೇಸಿ ಗೋವು ಸಂಸ್ಕೃತಿಯ ಚಳವಳಿಯ ಭಾಗವಾಗಿ ರವಿಕುಮಾರ್ ಅವರು ಗೋಶಾಲೆಗೆ ಭೇಟಿ ನೀಡಿ ಇಲ್ಲಿನ ಸ್ಥಿತಿಗಳನ್ನು ವೀಕ್ಷಿಸಿದ್ದು, ರಾಷ್ಟ್ರೀಯವಾದ, ಗೋಸೇವೆ, ಧರ್ಮ ಜಾಗೃತಿ ಹೆಚ್ಚಾಗಿದೆ. ಭಾರತ ಉನ್ನತ ಸಂಪತ್ತಾದ ಗೋವನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಗೋಶಾಲೆಗಳು ಎದುರಿಸುತ್ತಿರುವ ಸವಾಲುಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಬೇಕಿದೆ. ದೇಶದಲ್ಲಿ ಗೋವು ಉಳಿಯಬೇಕು ಎಂದರು. ಗೋಶಾಲೆ ಟ್ರಸ್ಟಿಗಳಾದ ಶ್ರೀರಾಮ್ ಆಂಗೀರಸ, ಸುಮಾ ನಾಗೇಶ್ ಮತ್ತಿತರರಿದ್ದರು.