ಕಡೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ನಡೆಯಿತು
ಕಡೂರು: ದೇಶ ಸಧೃಡವಾಗಬೇಕಾದರೆ ಸೈನ್ಯ ಗಟ್ಟಿಯಾಗಿರಬೇಕು. ಮಕ್ಕಳಿಗೆ ಬಾಲ್ಯದಲ್ಲಿಯೇ ದೇಶಪ್ರೇಮ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ನಿವೃತ್ತ ಕರ್ನಲ್ ಆನಂದ್ ಕುಮಾರ್ ಹೇಳಿದರು.
ನಿಡಘಟ್ಟ ಗ್ರಾಮದಲ್ಲಿ ತಾಲೂಕು ಮಾಜಿ ಸೈನಿಕರ ಸಂಘ ಅಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಗಿಲ್ ಯುದ್ಧ ನಡೆದು ಇಂದಿಗೆ 29 ವರ್ಷವಾಗಿದೆ. ಅಂದಿನಿಂದ ಇಂದಿನವರೆಗೆ ವಿಜಯೋತ್ಸವ ಆಚರಿಸಲಾಗುತ್ತಿದೆ. ಸೈನಿಕರ ತ್ಯಾಗ ಬಲಿದಾನಗಳಿಂದ ಕಾರ್ಗಿಲ್ ವಿಜಯ ಪತಾಕೆ ಪಡೆಯಲಾಗಿದೆ. ಹುತಾತ್ಮರಾದ 520 ಸೈನಿಕರನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿ. ಗ್ರಾಮದ ಯುವ ಸಮೂಹವು ಒಗ್ಗೂಡಿ ಕಾರ್ಗಿಲ್ ವಿಜಯೋತ್ಸವ ಆಚರಣೆಗೆ ಒತ್ತುಕೊಟ್ಟಿರುವುದು ಶ್ಲಾಘನೀಯ. ಪಾಲಕರು ತಮ್ಮ ಮಕ್ಕಳನ್ನು ಸೈನ್ಯಕ್ಕೆ ಸೇರಿಸಬೇಕು ಎಂದು ಹೇಳಿದರು.
ತಾಲೂಕು ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ನಿವೃತ್ತ ಯೋಧ ಚಂದ್ರಪ್ಪ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ಯೋಧರು ಜಾಥಾ ನಡೆಸಿ ಜಾಗೃತಿ ಮೂಡಿಸಿದರು. ಮಾಜಿ ಸೈನಿಕರನ್ನು ಗೌರವಿಸಲಾಯಿತು.
ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶೇಖರಪ್ಪ, ಉಪಾಧ್ಯಕ್ಷ ಯೋಗೀಶ್, ಕಾರ್ಯದರ್ಶಿ ಗೋವಿಂದಪ್ಪ, ಎನ್.ವಿ.ಕೃಷ್ಣಮೂರ್ತಿ, ಎನ್ ಸಿ ಕುಬೇರೇಗೌಡ, ಸ್ವತಂತ್ರ ಸೇನಾನಿ ಎ.ಸಿ. ಗಂಗಾಧರಪ್ಪ, ಗ್ರಾಪಂ ಉಪಾಧ್ಯಕ್ಷೆ ಗೀತಾ ತಿರುಮಲೇಗೌಡ ಇದ್ದರು.