ಕಡೂರು ತಾಲೂಕು ಚಿಕ್ಕಬಾಸೂರು ಬಳಿ ಇರುವ ಅಮೃತ್ ಮಹಲ್ ಕಾವಲು ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ಮೋಹನ್‌ಕುಮಾರ್, ಸೋಮಶೇಖರ್, ಪ್ರಕಾಶ್, ಹರ್ಷ, ತ್ಯಾಗರಾಜ್ ಮತ್ತಿತರರಿದ್ದರು.
ಕಡೂರು: ಅಮೃತ್ ಮಹಲ್ ಕಾವಲಿನ ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿಕೊಡಬೇಕೆಂಬ ಷರತ್ತಿನೊಂದಿಗೆ 7.5 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ತಾಲೂಕಿನ ಬಿಳುವಾಲ ಮತ್ತು ಬಾಸೂರು ಅಮೃತ್ ಕಾವಲು ಪ್ರದೇಶದಲ್ಲಿ ಭಾನುವಾರ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಯಡಿ ತುಮಕೂರು ಶಾಖಾ ಕಾಲುವೆ ಕಾಮಗಾರಿ ನಡೆಸಲು ಕಾವಲಿನ ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂಬ ಅಮೃತ್ ಮಹಲ್ ಇಲಾಖೆಯ ಷರತ್ತಿನೊಂದಿಗೆ ಈ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತದೆ ಎಂದರು.
ಜಾನುವಾರುಗಳಿಗೆ ಚೈನ್ ಲಿಂಕ್ ಮೆಷ್‌ನೊಂದಿಗೆ 200 ಮೀಟರ್ ಸುತ್ತಳತೆಯ ಬೇಲಿ ನಿರ್ಮಾಣ, ಒಣಮೇವು ದಾಸ್ತಾನು, ಕಟ್ಟಡ ಹಾಗೂ ಮೇಲ್ಛಾವಣಿ ನಿರ್ಮಾಣ, ಮೇವಿನ ಪ್ಲಾಟ್‌ಗಳಿಗೆ ಜಾನುವಾರುಗಳು ಹೋಗಲು ಸೇತುವೆ ನಿರ್ಮಾಣ, ಜಾಲಿ ಹಾಗೂ ಮುಳ್ಳಿನ ಗಿಡಗಳನ್ನು ತೆರವುಗೊಳಿಸಿ ಹುಲ್ಲುಗಾವಲು ಅಭಿವೃದ್ಧಿಪಡಿಸುವುದು, ನೀರಿನ ವ್ಯವಸ್ಥೆಗೆ ಕೊಳವೆ ಬಾವಿ ಕೊರೆಸಲು ಸೋಲಾರ್ ಪಂಪ್‌ಸೆಟ್ ಅಳವಡಿಸುವುದರ ಜತೆಗೆ ಪೈಪ್‌ಲೈನ್ ನಿರ್ಮಾಣ, ಕಾಲುವೆಯ ಎರಡೂ ಬದಿಗಳಲ್ಲಿ ಕತ್ತಾಳೆ ಮತ್ತು ಬಿದಿರು ಬೆಳೆಸುವುದು ಇದರಲ್ಲಿ ಸೇರಿವೆ ಎಂದರು.
ಪುರಸಭೆ ಮಾಜಿ ಉಪಾಧ್ಯಕ್ಷ ತೋಟದಮನೆ ಮೋಹನ್‌ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ಸೋಮಶೇಖರ್, ಬಿಳುವಾಲ ಪ್ರಕಾಶ್, ಕುಮಾರ್, ವಿಶ್ವೇಶ್ವರಯ್ಯ ಜಲ ನಿಗಮದ ಎಇಇಗಳಾದ ಹರ್ಷ, ತ್ಯಾಗರಾಜ್ ಮತ್ತಿತರರಿದ್ದರು.