ಚಿಕ್ಕಮಗಳೂರಿನ ಜಿಪಂ ಮಿನಿ ಸಭಾಂಗಣದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಯಿತು. ತಿಮ್ಮರಾಜು, ಮಂಜುಳಾ, ಸುಂದರೇಶ್ ಮತ್ತಿತರರಿದ್ದರು. 
ಚಿಕ್ಕಮಗಳೂರು

ಕೈಗಾರಿಕೋದ್ಯಮಿಗಳೇ ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿ

ಚಿಕ್ಕಮಗಳೂರು: ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗಳೊಂದಿಗೆ ಉತ್ತಮ ಕಲಿಕೆ ಉಜ್ವಲ ಭವಿಷ್ಯ ಘೋಷಣೆಯಡಿ ಕೆಪಿಎಸ್ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದ್ದು, ಶಾಲೆಗಳ ಅಭಿವೃದ್ಧಿಗೆ ಕೈಗಾರಿಕೋದ್ಯಮಿಗಳು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ತಿಳಿಸಿದರು.

ಜಿಪಂ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಮಾಚಗೊಂಡನಹಳ್ಳಿ, ಆಲ್ದೂರು, ಸೊಕ್ಕೆ, ಬಾಳೆಹೊನ್ನೂರು, ಗೋಣಿಬೀಡು, ಬಾಳಗಡಿ,ನಿಡಘಟ್ಟ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ನವೀಕರಿಸಲು ಸರ್ಕಾರ ಆದೇಶ ಹೊರಡಿಸಿದ್ದು ಪೂರ್ವ ಪ್ರಾಥಮಿಕದಿಂದ 5ನೇ ತರಗತಿ ಕನ್ನಡ ಮತ್ತು ಆಂಗ್ಲ ದ್ವಿಭಾಷಾ ಮಾಧ್ಯಮ ಬೋಧನೆ, 6 ರಿಂದ 12ನೇ ತರಗತಿಯವರಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದೊಂದಿಗೆ ಕಂಪ್ಯೂಟರ್ ಶಿಕ್ಷಣ, ಕೌಶಲ್ಯ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮರ್ಥ್ಯಾಭಿವೃದ್ಧಿ ತರಗತಿಗಳಿಗೂ ಸಹ ಒತ್ತು ನೀಡಲಾಗುತ್ತದೆ ಎಂದರು.

ಸರ್ಕಾರವು ಕೆ.ಪಿ.ಎಸ್ ಶಾಲೆಗಳ ಅಭಿವೃದ್ಧಿಗೆ ಕಾರ್ಪೊರೇಟ್ ಸಂಸ್ಥೆಗಳ ಸಿಎಸ್‌ಆರ್ ನಿಧಿ ಬಳಸಿಕೊಂಡು ವಿಶೇಷ ಪೋರ್ಟಲ್ ಬಿಡುಗಡೆ ಮಾಡಿದೆ. ಈ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಕಂಪನಿಗಳಿಗೆ ಕೋ-ಬ್ರಾಡಿಂಗ್ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಈಗಾಗಲೇ ಆಲ್ದೂರಿನಲ್ಲಿ ಉನ್ನತೀಕರಿಸಲಾಗುತ್ತಿರುವ ಶಾಲೆಗೆ ವಿದ್ಯಾ ಕಾಫಿವರ್ಕ್ಸ್ ಮಾಲೀಕರು ಕಟ್ಟಡ ನಿರ್ಮಾಣಕ್ಕೆ ಹಾಗೂ ಶಾಲೆ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಅದೇ ರೀತಿ ಜಿಲ್ಲೆಯ ಉದ್ಯಮಿಗಳು ಹಾಗೂ ದಾನಿಗಳು ಉಳಿದ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ಶಾಲೆಗೆ ಹೆಚ್ಚುವರಿ ಭೂಮಿ ಒದಗಿಸಿದ್ದಲ್ಲಿ ಸರ್ಕಾರದ ಹೆಸರಿನಲ್ಲಿ ನೋಂದಯಿಸಲಾಗುವುದು ಎಂದು ಹೇಳಿದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಮ್ಮರಾಜು, ಡಯಟ್ ಪ್ರಾಚಾರ್ಯ ಸುಂದರೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಂಜುಳ ಹಾಗೂ ಕೈಗಾರಿಕೋದ್ಯಮಿಗಳು ಹಾಜರಿದ್ದರು.