ಮೂಡಿಗೆರೆಯಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಬೂಕರ್ ಪ್ರಶಸ್ತಿ ಪುರಸ್ಕೃತ, ಸಾಹಿತಿ ಭಾನು ಮುಷ್ತಾಕ್ ಉದ್ಘಾಟಿಸಿದರು. 
ಚಿಕ್ಕಮಗಳೂರು

ಶಕ್ತಿಶಾಲಿ ಸಂವಿಧಾನದಿಂದ ಭಾರತಕ್ಕೆ ಅಗ್ರಗಣ್ಯ ಸ್ಥಾನ

ಮೂಡಿಗೆರೆ: ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಶಕ್ತಿ ಶಾಲಿಯಾದ ಸಂವಿಧಾನ ನೀಡದಿದ್ದರೆ ಜಾಗತಿಕ ಮಟ್ಟದಲ್ಲಿ ಭಾರತೀಯರು ತಲೆ ತಗ್ಗಿಸಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಉತ್ತಮ ಸಂವಿಧಾನದಿಂದ ಭಾರತ ವಿಶ್ವದಲ್ಲಿ ಅಗ್ರಗಣ್ಯ ರಾಷ್ಟ್ರವಾಗಿದೆ ಎಂದು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಭಾನು ಮುಷ್ತಾಕ್ ಹೇಳಿದರು.
ಅಡ್ಯಂತಾಯ ರಂಗಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯರು ನೆಮ್ಮದಿ ಜೀವನ ನಡೆಸಬೇಕು ಎಂದು ಅಂಬೇಡ್ಕರ್ ತಮ್ಮ ಬದುಕನ್ನು ಈ ಸಮಾಜಕ್ಕಾಗಿ ಅರ್ಪಿಸಿ ಸಂವಿಧಾನ ಕೊಟ್ಟಿದ್ದಾರೆ. ಇದರಿಂದ ನಮಗೆ ಸಮಾನವಾದ ಹಕ್ಕು ಹಾಗೂ ಅವಕಾಶಗಳು ಸಂವಿಧಾನಾತ್ಮಕವಾಗಿ ದೊರಕಿದ್ದರೂ ಸ್ವಾರ್ಥ ಮತ್ತು ದ್ವೇಷ ಭಾವನೆಯಿಂದ ಬದುಕುವ ಸ್ಥಿತಿ ಉಂಟಾಗಿದೆ. ನ್ಯಾಯ ಎನ್ನುವುದು ಕಾನೂನಿನಲ್ಲಿ ಬರುವ ಪದ ಅದು ನಮ್ಮ ನಡೆ, ನುಡಿಯಲ್ಲಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದು ಹೇಳಿದರು.
ಪ್ರಗತಿಪರ ಚಿಂತಕ ಶಿವಸುಂದರ್ ಮಾತನಾಡಿ, ಬಡವ, ಶ್ರೀಮಂತ ಎಂಬ ಬೇಧ ಭಾವದ ರೋಗದ ಅಂಟಿಕೊಂಡಿದೆ. ಜಾತಿ ಮತ್ತು ಕೋಮುವಾದದ ರೋಗ ಇನ್ನಷ್ಟು ಹೆಚ್ಚಾಗಿದೆ. ಇದನ್ನು ನಿರ್ಮೂಲನೆ ಮಾಡಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ಎಂಬ ಔಷಧ ಕೊಟ್ಟಿದ್ದಾರೆ. ಆದರೆ ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಅಂಬೇಡ್ಕರ್ ಅವರನ್ನು ಪಂಚತೀರ್ಥ ಎಂದು ಬಿಂಬಿಸಲು ಹೊರಟಿರುವುದು ಅಪಾಯದ ಮುನ್ಸೂಚನೆಯಾಗಿದೆ ಎಂದರು.
ಸಮಿತಿ ಉಪಾಧ್ಯಕ್ಷ ಬಿ.ರುದ್ರಯ್ಯ, ಹಾಲಯ್ಯ, ಕೋಶಾಧ್ಯಕ್ಷ ಸಿದ್ದೇಶ್ ಕೆಸವೊಳಲು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಂ, ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕಿರ್ ಹುಸೇನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಕಾಫಿ ಬೆಳೆಗಾರ ಎಂ.ಪಿ.ಮನು, ಸಿಪಿಐ ಮುಖಂಡ ಬಿ.ಕೆ.ಲಕ್ಷ್ಮಣ್ ಕುಮಾರ್, ಉದ್ಯಮಿ ಮಂಚೇಗೌಡ, ಎಂ.ಎಸ್.ಅನಂತ್, ಬ್ರಿಜೇಶ್, ಸಿ.ಕೆ.ಇಬ್ರಾಹಿಂ, ಅಬ್ರಾರ್ ಅಹಮದ್, ಯು.ಬಿ.ಮಂಜಯ್ಯ, ಎಲ್.ಬಿ.ರಮೇಶ್, ಬಿ.ಎಂ.ಶಂಕರ್, ಎಂ.ದೇಜಪ್ಪ, ಅಕ್ರಮ್ ಹಾಜಿ, ಸಾವಿತ್ರಿ ಇದ್ದರು.