ಬೀರೂರಿನ ಪುರಸಭೆ ಸಭಾಂಗಣದಲ್ಲಿ ಶನಿವಾರ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆ ನಡೆಯಿತು.
ಬೀರೂರು: ಸ್ವಾತಂತ್ರ್ಯ ದಿನಾಚರಣೆಯನ್ನು ಕೇವಲ ಆಚರಣೆಗೆ ಸೀಮಿತವಾಗದೆ ದೇಶಭಕ್ತಿ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ಹಬ್ಬವಾಗಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸಿ.ಎಸ್.ಮಂಜುನಾಥ್ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ ಮತ್ತು ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಆಗಸ್ಟ್ 15ರಂದು ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡು ಕೆಎಲ್‌ಕೆ ಮೈದಾನದಲ್ಲಿ ಅದ್ದೂರಿಯಾಗಿ ಆಚರಿಸಬೇಕು. ಧ್ವಜಾರೋಹಣ ಕಾರ್ಯಕ್ರಮ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಪಥಸಂಚಲನ, ಸ್ವಚ್ಛತಾ ಅಭಿಯಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ನಗರದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಸ್ವಚ್ಛಗೊಳಿಸಿ ವಿದ್ಯುತ್‌ದೀಪ ಹಾಗೂ ಹಸಿರು ತಳಿರು ತೋರಣಗಳಿಂದ ಅಲಂಕರಿಸುವುದು ಆಯಾ ಶಾಲೆಗಳ ಜವಾಬ್ದಾರಿಯಾಗಿದೆ ಈ ಸಂಬಂಧ ಪುರಸಭೆಯಿಂದ ಸಹಕಾರ ನೀಡಲಾಗುವುದು ಎಂದರು.
ಪುರಸಭೆ ಆಶ್ರಯ ಸಮಿತಿ ಸದಸ್ಯ ಮುಬಾರಕ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೆಲವು ಖಾಸಗಿ ಶಾಲೆಗಳು ಕೆಎಲ್‌ಕೆ ಮೈದಾನಕ್ಕೆ ಬಾರಲು ನಿರ್ಲಕ್ಷೃ ತೋರುತ್ತಿದ್ದಾರೆ. ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸುವ ಸಭೆಗೆ ಎಲ್ಲ ಸರ್ಕಾರಿ ಇಲಾಖೆಗಳು ಭಾಗವಹಿಸಬೇಕು ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಕಾಲೇಜಿನ ಮುಖ್ಯಶಿಕ್ಷಕರು ಮತ್ತು ಸಹ ಶಿಕ್ಷಕರು ಮಾತ್ರ ಹಾಜರಿದ್ದಾರೆ. ಹಾಜರಾಗದ ಕಚೇರಿಗಳಿಗೆ ನೋಟೀಸ್ ಜಾರಿ ಮಾಡಿ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು ಎಂದರು.
ಬೆಳಗ್ಗೆ 8.30ರೊಳಗೆ ತಮ್ಮ ಶಾಲೆಗಳಲ್ಲಿ ಧ್ವಜಾರೋಹಣ ಮುಗಿಸಿ ಮಕ್ಕಳೊಂದಿಗೆ ಕೆಎಲ್‌ಕೆ ಮೈದಾನಕ್ಕೆ ಆಗಮಿಸಬೇಕು ಎಂದು ಆದೇಶಿಸಿದರು. ಕೆಎಲ್‌ಕೆ ಮೈದಾನದಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಶಾಮಿಯಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸಬೇಕು. ರಸ್ತೆ ದಾಟುವ ಸುರಕ್ಷತೆಗಾಗಿ ಬ್ಯಾರಿಗೇಟ್ ವ್ಯವಸ್ಥೆ ಕಲ್ಪಿಸಬೇಕು. ಪಥಸಂಚಲನದಲ್ಲಿ ಸ್ತಬ್ಧ ಚಿತ್ರಗಳ ವಾಹನಗಳು, ಮಕ್ಕಳಿಗೆ ಸಿಹಿ ಹಂಚಿಕೆ, ಗಣ್ಯರಿಗೆ ಸನ್ಮಾನ, ಸೇರಿದಂತೆ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಮರಣೀಯವಾಗಿ ಆಚರಿಸಬೇಕು ಎಂದರು.
ಬಿಇಒ ಬುರ್ಹಾನುದ್ದೀನ್ ಚೋಪ್ದಾರ್, ಎಎಸ್‌ಐ ಗುರುರಾಜ್, ಪುರಸಭೆ ಪರಿಸರ ಇಂಜಿನಿಯರ್ ನೂರುದ್ದೀನ್, ಶಾಲಾ ಮುಖ್ಯಶಿಕ್ಷಕರು, ಪುರಸಭೆ ಆರೋಗ್ಯ ನಿರೀಕ್ಷಕ ಲಕ್ಷ್ಮಣ್ ಹಾಗೂ ಇತರರು ಇದ್ದರು.