ಎನ್.ಆರ್.ಪುರ ತಾಲೂಕು ಬಿ.ಎಚ್.ಕೈಮರದ ಐಟಿಐ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಬಾಲಕೃಷ್ಣಭಟ್, ಮಂಜುನಾಥ್‌ಗೌಡ, ರವಿರಾಜ್, ತೀರ್ಥರಾಜ್, ಅನ್ನಪೂರ್ಣಾ ಇದ್ದರು.
ಎನ್.ಆರ್.ಪುರ: ಸಹವಾಸ ದೋಷದಿಂದ ಮಕ್ಕಳಲ್ಲಿ ದುಶ್ಚಟದ ಪ್ರಮಾಣ ಹೆಚ್ಚುತ್ತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಬಾಲಕೃಷ್ಣಭಟ್ ಹೇಳಿದರು.
ಬಿ.ಎಚ್.ಕೈಮರದ ಐಟಿಐ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆಯ ಸಹಯೋಗದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ದುಶ್ಚಟದ ಪರಿಣಾಮದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಶಾಲಾ, ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳು ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ತಂದೆ, ತಾಯಿ ಹಾಗೂ ಗುರು ಹಿರಿಯರಿಗೆ ಗೌರವ ನೀಡಬೇಕು. ಶಾಲಾ, ಕಾಲೇಜುಗಳಲ್ಲಿ ಒಳ್ಳೆಯ ಮಿತ್ರರ ಸಹವಾಸ ಮಾಡಬೇಕು ಎಂದರು.
ಕಟ್ಟಿನಮನೆ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಮಂಜುನಾಥ್‌ಗೌಡ ಮಾತನಾಡಿ, ಮಕ್ಕಳು ಜ್ಞಾನ ಸಂಪಾದನೆಗಾಗಿ ಹೆಚ್ಚು ಪುಸ್ತಕಗಳನ್ನು ಓದಬೇಕು. ಮಹಾತ್ಮರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು. ಅವರ ಜೀವನದ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದರು.
ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ರವಿರಾಜ್ ಮಾತನಾಡಿ, ನಾನು ಧರ್ಮಸ್ಥಳದ ರತ್ನ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದೆ. ಅಲ್ಲಿನ ಶಿಕ್ಷಣ ನನ್ನ ಬದುಕನ್ನು ರೂಪಿಸಿತು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೈಮರ ವಲಯ ಮೇಲ್ವಿಚಾರಕ ತೀರ್ಥರಾಜ್, ಸೇವಾ ಪ್ರತಿನಿಧಿ ಅನ್ನಪೂರ್ಣಾ, ಕಾಲೇಜಿನ ಕಿರಿಯ ತರಬೇತಿ ಅಧಿಕಾರಿಗಳು ಇದ್ದರು.