ಬಾಳೆಹೊನ್ನೂರು ಪಟ್ಟಣದ ಭದ್ರಾನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದು.
ಬಾಳೆಹೊನ್ನೂರು: ಕಳೆದ ಒಂದು ತಿಂಗಳಿನಿಂದ ಕಣ್ಣಾಮುಚ್ಚಾಲೆಯಾಡುತ್ತಿದ್ದ ಮುಂಗಾರು ಮಳೆ ಬಾಳೆಹೊನ್ನೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿರುಸುಗೊಂಡಿದ್ದು, ಮಂಗಳವಾರದ ಒಂದೇ ದಿನ ಸುರಿದ ಮಳೆಗೆ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.
ಜೂನ್ ಒಂದರಿಂದಲೇ ಮುಂಗಾರು ಆರಂಭದ ಮುನ್ಸೂಚನೆಯಿದ್ದರೂ ಸಹ ಮೋಡ ಕವಿದ ವಾತಾವರಣ, ಆಗೊಮ್ಮೆ ಈಗೊಮ್ಮೆ ತುಂತುರು ಮಳೆಯಾಗುತಿತ್ತು. ಮಲೆನಾಡು ಭಾಗದಲ್ಲಿ ಕಾಫಿ, ಅಡಕೆ ಬೆಳೆಗಾರರು ತೋಟಗಳಲ್ಲಿ ಮಳೆಗಾಲದ ಕೆಲಸಗಳನ್ನು ಸಂಪೂರ್ಣಗೊಳಿಸಿ ಮಳೆಗಾಗಿ ಕಾಯುತ್ತಿದ್ದರು. ಭತ್ತ ಬೆಳೆಗಾರರು ಸಹ ಭತ್ತದ ಕೃಷಿ ಕಾರ್ಯಕ್ಕಾಗಿ ಸಿದ್ಧಗೊಂಡಿದ್ದರು. ಆದರೆ ಮಳೆ ಸಂಪೂರ್ಣವಾಗಿ ಕ್ಷೀಣಿಸಿತ್ತು.
ಆರಿದ್ರೆ ಮಳೆ ಸೋಮವಾರ ಮಧ್ಯಾಹ್ನದ ಬಳಿಕ ಬಿರುಸುಗೊಂಡು ಉತ್ತಮ ಪ್ರಮಾಣದಲ್ಲಿ ಸುರಿದಿದೆ. ಬಾಳೆಹೊನ್ನೂರು ಸುತ್ತಮುತ್ತಲ ಪ್ರದೇಶ ಮಾತ್ರವಲ್ಲದೇ ಭದ್ರಾನದಿಯ ಉಗಮ ಸ್ಥಾನ ಗಂಗಾಮೂಲ, ಕುದುರೆಮುಖ, ಕಳಸ, ಬಾಳೆಹೊಳೆ ಮುಂತಾದ ಭಾಗಗಳಲ್ಲಿ ಸಹ ಉತ್ತಮ ಮಳೆಯಾದ ಪರಿಣಾಮ ಭದ್ರಾನದಿಯಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಳವಾಗಿದೆ.
ಪಟ್ಟಣದ ಭದ್ರಾನದಿ ಸೇತುವೆ ಕಾಮಗಾರಿಯು ಕಳೆದ ಹಲವು ವರ್ಷಗಳಿಂದ ಕುಂಟುತ್ತಾ ಸಾಗಿದ್ದು, ಸೇತುವೆ ಕಾಮಗಾರಿಗಾಗಿ ಭದ್ರಾನದಿ ಬಳಿಯಲ್ಲಿ ತಂದ ಕ್ರೇನ್ ಹಾಗೂ ಜನರೇಟರ್ ನೀರಿನಲ್ಲಿ ಮುಳುಗಿ ಹೋಗಿದೆ. ಸೋಮವಾರ ಬೆಳಗ್ಗೆ ಬಾಳೆಹೊನ್ನೂರು ಸುತ್ತಮುತ್ತ ಬಿಸಿಲಿನ ವಾತಾವರಣವಿದ್ದು, ಭದ್ರಾನದಿ ದಡದಲ್ಲಿ ನೀರು ಸಂಪೂರ್ಣ ಬತ್ತಿದ್ದರಿಂದ ಮೈದಾನ ನಿರ್ಮಾಣವಾಗಿತ್ತು. ಸ್ಥಳೀಯ ಯುವಕರು ಭದ್ರಾನದಿ ದಂಡೆ ಮರಳಿನ ಮೇಳೆ ವಾಲಿಬಾಲ್ ಕೋರ್ಟ್ ಮಾಡಿ ಕೆಲವು ದಿನಗಳಿಂದ ಆಟವಾಡುತ್ತಿದ್ದರು. ಸೋಮವಾರವೂ ಆಟವಾಡಿದ್ದು, ಮಂಗಳವಾರ ಬೆಳಗ್ಗಿನ ವೇಳೆಗೆ ವಾಲಿಬಾಲ್ ನೆಟ್ ಸಂಪೂರ್ಣ ನೀರಿನಿಂದ ಮುಳುಗಡೆಯಾಗಿ, ಬರೀ ಕಂಬಗಳಷ್ಟೇ ಗೋಚರವಾಗುತಿತ್ತು.