ಕಾಫಿ  
ಚಿಕ್ಕಮಗಳೂರು

ಮಳೆ ಹೆಚ್ಚಳ, ಕಾಫಿ ಧಾರಣೆ ಭಾರಿ ಏರಿಕೆ

ಜಿ.ಹೆಚ್. ಧನ್ಯಕುಮಾರ್
ಆಲ್ದೂರು: ಜುಲೈನಲ್ಲಿ ಕಾಫಿ ಧಾರಣೆ ಭಾರಿ ಏರಿಕೆ ಕಂಡಿದ್ದು ದಾಸ್ತಾನು ಇಟ್ಟವರಿಗೆ ಸಂತಸ ಮೂಡಿಸಿದರೆ, ಮಾರಾಟ ಮಾಡಿದವರಿಗೆ ನಿರಾಶೆಯಾಗಿದೆ.
ಜೂನ್ ಅಂತ್ಯದಲ್ಲಿ 22,000 ರೂ ಇದ್ದ ಅರೇಬಿಕಾ ಪಾರ್ಚ್‌ಮೆಂಟ್, ಜುಲೈಗೆ 7ನೇ 26,000 ರೂಗಳಾಗಿವೆ. ಅರೇಬಿಕಾ ಚೆರಿ 12ರಿಂದ 14 ಸಾವಿರಕ್ಕೆ ಏರಿಕೆಯಾಗಿದೆ. ರೋಬಾಸ್ಟಾ 10 ಸಾವಿರದಿಂದ 11ಸಾವಿರಕ್ಕೆ ಏರಿಕೆಯಾಗಿದೆ. ಒಂದು ತಿಂಗಳಲ್ಲಿ ಏರಿಕೆಯಾದ ಈ ಧಾರಣೆಯಿಂದ ಕಾಫಿ ದಾಸ್ತಾನು ಇಟ್ಟವರು ಮಾರಾಟ ಮಾಡಬೇಕಾ, ಅಥವಾ ಇನ್ನು ಉತ್ತಮ ಧಾರಣೆ ಬರುವ ವರೆಗೂ ಕಾಯಬೇಕೂ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.
2026ರ ಡಿಸೆಂಬರ್‌ನಲ್ಲಿ 26 ಸಾವಿರ ರೂ. ಧಾರಣೆ ಇದ್ದಾಗ ಕೆಲವು ಬೆಳೆಗಾರರು ಹಂತ, ಹಂತವಾಗಿ ಮಾರಾಟ ಮಾಡಿ, ಅಲ್ಪ ಪ್ರಮಾಣದ ಕಾಫಿ ಉಳಿಸಿಕೊಂಡಿದ್ದರು. ಇನ್ನು ಹೆಚ್ಚಿನ ಧಾರಣೆ ನಿರೀಕ್ಷೆಯಲ್ಲಿದ್ದರು. ಕೆಲವು ಬೆಳೆಗಾರರು ಪೂರ್ಣ ಪ್ರಮಾಣದ ಕಾಫಿ ದಾಸ್ತಾನು ಇರಿಸಿ ಹೆಚ್ಚಿನ ದರಕ್ಕಾಗಿ ಕಾಯುತ್ತಿದ್ದರು. ಇನ್ನು ಕೆಲ ಬೆಳೆಗಾರರು 22 ಸಾವಿರದಿಂದ 23 ಸಾವಿರಕ್ಕೆ ಮಾರಾಟ ಮಾಡಿ ಅದೇ ಉತ್ತಮ ಬೆಲೆ ಎಂದು ಸಮಾಧಾನ ಪಟ್ಟುಕೊಂಡಿದ್ದರು.
ಆದರೆ ಈ ತಿಂಗಳು ಕಾಫಿ ಧಾರಣೆಯಲ್ಲಿ ಏರಿಕೆ ಕಂಡಿದ್ದು ಸೋಮವಾರ ಒಂದೇ ದಿನದಲ್ಲಿ ಅರೇಬಿಕಾ ಪಾರ್ಚ್‌ಮೆಂಟ್ 1,500 ರೂ.ವರೆಗೆ ಏರಿಕೆಯಾಗಿದೆ. ಬೆಳೆಗಾರರು ಈ ಧಾರಣೆ ಏರಿಕೆ ನಿರೀಕ್ಷೆ ಮಾಡಿರಲಿಲ್ಲ. ಕಾಫಿ ಬೆಳೆಯುವ ಇತರ ದೇಶಗಳಲ್ಲಿ ಹೆಚ್ಚಾಗಿ ಮಳೆಯಾಗಿ ಕಾಫಿಗೆ ಹಾನಿಯಾಗಿರುವುದರಿಂದ ಕಾಫಿ ಧಾರಣೆ ಇನ್ನೂ ಏರಿಕೆಯಾದರೂ ಆಶ್ಚರ್ಯವಿಲ್ಲ.