ಕಿರುಗುಂದ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಕೃಷಿಭೂಮಿ ಉಳಿಸಿ ಅಭಿಯಾನ ಕಾರ್ಯಕ್ರಮ ನಡೆಯಿತು.
ಮೂಡಿಗೆರೆ: ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆ ನಡೆಸಿ ಅದರ ಸತ್ವವನ್ನು ಕಾಪಾಡಲು ರಸಗೊಬ್ಬರ ಮತ್ತು ಕೀಟನಾಶಕ ಬಳಸುವ ಬದಲು ನೈಸರ್ಗಿಕ, ಸಾವಯವ ಮತ್ತು ಕೊಟ್ಟಿಗೆ ಗೊಬ್ಬರ ಬಳಸಿದರೆ ಮಣ್ಣು ಸತ್ವ ಉಳಿಸಿಕೊಳ್ಳುವ ಜತೆಗೆ ಉತ್ತಮ ಇಳುವರಿ ರೈತರ ಕೈ ಸೇರಲು ಸಾಧ್ಯವಿದೆ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಜಿ.ಎಂ.ಪ್ರಶಾಂತ್ ಹೇಳಿದರು.
ಕೃಷಿ ಇಲಾಖೆಯಿಂದ ಕಿರುಗುಂದ ಗ್ರಾಪಂ ಸಭಾಂಗಣದಲ್ಲಿ ನಡೆದ ಕೃಷಿ ಭೂಮಿ ಉಳಿಸಿ, ಬೀಜೋಪಚಾರ ಆಂದೋಲನ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಬಗ್ಗೆ ರೈತರಿಗೆ ಮಾಹಿತಿ ನೀಡಿ, ರೈತರು ನಮ್ಮ ಜಮೀನಿನಲ್ಲಿ ಕೃಷಿ ನಡೆಸುವ ಮುನ್ನ ಮಣ್ಣಿನ ಫಲವತ್ತತೆ ಪರೀಕ್ಷಿಸಿಕೊಳ್ಳ ಬೇಕು. ಕೃಷಿ ಭೂಮಿ ಆರೋಗ್ಯ ಕಾಪಾಡಿಕೊಳ್ಳುವುದು ರೈತರ ಜವಾಬ್ದಾರಿ ಎಂದರು.
ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ರಶ್ಮಿ ಮಾತನಾಡಿ, ಮಲೆನಾಡು ಕಾಫಿ ಬೆಳೆಯುವ ಪ್ರದೇಶವಾಗಿದ್ದು, ಅದೆ ರೀತಿ ರೈತರು ತಮ್ಮ ಜಮೀನಿನಲ್ಲಿ ಭತ್ತ, ಬಾಳೆ, ತರಕಾರಿ ಸೇರಿದಂತೆ ಇನ್ನಿತರೆ ಬೆಳೆ ಬೆಳೆಯಲು ಉತ್ಸಾಹ ತೋರಬೇಕು. ಭತ್ತದ ಬೆಳೆಯಲ್ಲಿ ಲಾಭಾಂಶ ಕಡಿಮೆ ಎಂಬ ಭಾವನೆ ಮೂಡುವುದು ಸಹಜ, ಆದರೆ ಭತ್ತದ ಬೆಳೆ ರೈತರನ್ನು ಎಂದೂ ಕೈ ಬಿಟ್ಟಿಲ್ಲ. ಹಿಂದೆ ತಾಲೂಕಿನಲ್ಲಿ ಸಾವಿರಾರು ಹೆಕ್ಟರ್ ಜಮೀನಿನಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಈಗ ಭತ್ತದ ಬೆಳೆ ಕಡಿಮೆಯಾಗಿದೆ. ರೈತರು ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿಸಿಕೊಂಡು ಅದಕ್ಕೆ ಸರಿಯಾಗಿ ಮನೆಯಲ್ಲಿ ತಯಾರಿಸಿದ ಕೊಟ್ಟಿಗೆ ಗೊಬ್ಬರ, ಜೈವಿಕ ಗೊಬ್ಬರ ಮತ್ತು ಜೈವಿಕ ಕೀಟನಾಶಕ ಬಳಸಿ ಕೃಷಿ ಚಟುವಟಿಕೆ ನಡೆಸಿದರೆ ಅಧಿಕ ಇಳುವರಿ ಜತೆಗೆ ರೈತರ ಕೈಗೆ ಹೆಚ್ಚು ಲಾಭಾಂಶ ದೊರೆಯಲಿದೆ ಎಂದು ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಯು.ಎಚ್.ರಾಜಶೇಖರ್, ಕೃಷಿಕರಾದ ದೊರೆ ಮಂಜುನಾಥ್, ಯಜಮಾನಾಚಾರ್, ಪ್ರೇಮ, ಸಾಧನಾ, ತ್ಯಾಗರಾಜ್ ಇತರರಿದ್ದರು.