ತರೀಕೆರೆ: ನಮಗೆ ತಿಳಿದಿರುವ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಜ್ಞಾನ ಸಹಾಯ ಮಾಡುತ್ತದೆ. ಆದರೆ ಕಲ್ಪನೆ ನಮಗೆ ಇನ್ನೂ ಅಸ್ತಿತ್ವಕ್ಕೆ ಬಾರದ ಹೊಸ ಹೊಸ ಆಲೋಚನೆಗಳನ್ನು ಸೃಷ್ಟಿಸಲು ಪ್ರೇರೇಪಿಸುತ್ತದೆ ಎಂದು ಶಿವಮೊಗ್ಗದ ಬಹುಮುಖಿ ಸಾಂಸ್ಕೃತಿಕ ಮತ್ತು ಸಾಹಿತ್ಯ ವಿನಿಮಯ ವೇದಿಕೆ ಅಧ್ಯಕ್ಷ ಡಾ.ನಾಗಭೂಷಣ್ ಹೇಳಿದರು.
ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಸೃಜನಶೀಲ ಬರವಣಿಗೆ ಮೂಲಕ ಪ್ರಕಟಿಸಿದ ಇನಾಟಿಟ್ಸ್ ಇಂಪಲ್ಸ್ ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಮಕ್ಕಳಲ್ಲಿರುವ ಸೃಜನಶೀಲತೆ, ಕಲ್ಪನೆ, ಸಾಹಿತ್ಯಾಸಕ್ತಿ ಮತ್ತು ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಈ ಕಾರ್ಯಕ್ರಮ ಅರ್ಥ ಪೂರ್ಣವಾಗಿದೆ. ಮಕ್ಕಳೇ ರಚಿಸಿದ ಚಿಂತನೆಗಳು ಹಾಗೂ ಸೃಜನಾತ್ಮಕ ಬರಹಗಳನ್ನು ಒಗ್ಗೂಡಿಸಿ ಪುಸ್ತಕದ ರೂಪದಲ್ಲಿ ಪ್ರಕಟಿಸಿರುವುದು ಹೆಮ್ಮೆಯ ವಿಷಯ ಎಂದರು.
ಕೆಲ ಕವಿಗಳು ನಮ್ಮೊಂದಿಗಿಲ್ಲದಿದ್ದರೂ ಅವರ ಪ್ರೇರಣೆ ಪುಸ್ತಕ ರೂಪದಲ್ಲಿ ಜೀವಂತಗೊಳಿಸುತ್ತದೆ. ಸಣ್ಣ ಸಣ್ಣ ವಿಷಯ, ವಿಚಾರಗಳು ಒಬ್ಬ ಲೇಖಕ ಬರಹಗಾರರಿಗೆ ಮಾತ್ರ ವಿಶೇಷವಾಗಿ ಕಾಣುತ್ತದೆ ಅದನ್ನು ವಿಶೇಷ ಕಲ್ಪನೆ, ಹೊಸ ಹೊಸ ಪದಗಳ ಮೂಲಕ ಪುಸ್ತಕ ರೂಪದಲ್ಲಿ ಪ್ರಕಟಿಸಿದರೆ ಮಾತ್ರ ಸಾಲದು ಆ ಪುಸ್ತಕವನ್ನು ಒಬ್ಬ ಓದುಗ ಕೊಂಡು ಓದಿ ಸಂಭ್ರಮಿಸಿದರೆ ಪುಸ್ತಕಕ್ಕೂ ಮತ್ತು ಪ್ರಕಟಿಸಿದ ಲೇಖಕರ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಶಾಲಾ ಕಾರ್ಯದರ್ಶಿ ಟಿ.ಜಿ.ಶಶಾಂಕ್ ಮಾತನಾಡಿ, ಮಕ್ಕಳಲ್ಲಿ ಓದುವ ಮತ್ತು ಬರೆಯುವ ಅಭ್ಯಾಸ ಬೆಳೆಸುವುದು. ಮಕ್ಕಳ ಸೃಜನಶೀಲತೆ ಜತೆ ಕಲ್ಪನಾ ಶಕ್ತಿಗೆ ವೇದಿಕೆ ಕಲ್ಪಿಸುವುದು. ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮತ್ತು ಅಭಿರುಚಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಪ್ರಾಚಾರ್ಯ ಡಾ.ಕಾರ್ತಿಕೇಯನ್ ಮಾತನಾಡಿ, ಶಿಕ್ಷಕರಾದ ಮನು ಮತ್ತು ವಿಷಯ ಶಿಕ್ಷಕರು ಮಕ್ಕಳ ಬರಹಗಳನ್ನು ತಿದ್ದಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಪುಸ್ತಕದಲ್ಲಿ 20ಕ್ಕೂ ಹೆಚ್ಚು ಮಕ್ಕಳು ಬರೆದಿದ್ದಾರೆ. ಮಕ್ಕಳ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟವಾದಾಗ ಅವರಿಗೆ ತಮ್ಮ ಆಲೋಚನೆಗಳಿಗೆ ಮೌಲ್ಯ ದೊರೆತ ಅನುಭವವಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚು ಓದಲು, ಬರೆಯಲು ಮತ್ತು ಹೊಸ ವಿಚಾರಗಳನ್ನು ಸೃಷ್ಟಿಸಲು ಪ್ರೇರಣೆ ನೀಡುತ್ತದೆ. ವಿಶೇಷವಾಗಿ ಸೃಜನಾತ್ಮಕ ಚಿಂತನೆಗಳು ಬರಹಗಳು ಮಕ್ಕಳಲ್ಲಿನ ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ಹೇಳಿದರು.
ಟ್ರಸ್ಟಿ ಅಶ್ವಿನಿ, ವಿದ್ಯಾರ್ಥಿನಿಯರಾದ ಕೃತಿಕ, ವೈಷ್ಣವಿ, ಶಾಲಾ ಸಹ ಶಿಕ್ಷಕರರಿದ್ದರು.