ಮೂಡಿಗೆರೆ ಪಟ್ಟಣದ ಲಯನ್ಸ್ ವೃತ್ತದ ಸುತ್ತಲು ಪಪಂ ಅನುಮತಿ ಇಲ್ಲದೆ ಅಕ್ರಮವಾಗಿ ಕಟ್ಟಿದ್ದ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಿರುವುದು. 
ಚಿಕ್ಕಮಗಳೂರು

ಮೂಡಿಗೆರೆಯಲ್ಲಿ ಅಕ್ರಮವಾಗಿ ಕಟ್ಟಿದ್ದ ಫ್ಲೆಕ್ಸ್ ,ಬ್ಯಾನರ್ ತೆರವು

ಮೂಡಿಗೆರೆ: ಪಟ್ಟಣ ಪಂಚಾಯಿತಿ ಅನುಮತಿ ಪಡೆಯದೆ ಲಯನ್ಸ್ ವೃತ್ತದ ಸುತ್ತ ಮತ್ತು ಪಟ್ಟಣದ ವಿವಿಧ ಕಡೆ ಕಟ್ಟಿದ್ದ ಬ್ಯಾನರ್, ಫ್ಲೆಕ್ಸ್‌ಗಳನ್ನು ಪಪಂ ಸಿಬ್ಬಂದಿ ಬುಧವಾರ ತೆರವುಗೊಳಿಸಿದರು.
ಪಪಂಗೆ ಆಡಳಿತಾಧಿಕಾರಿ ನೇಮಕವಾದ ನಂತರ ಲಯನ್ಸ್ ವೃತ್ತದ ಸುತ್ತ ಹಾಗೂ ಪಟ್ಟಣದ ಉದ್ದಗಲಕ್ಕೂ ದೊಡ್ಡ ಗಾತ್ರದ ಫ್ಲೆಕ್ಸ್‌ಗಳನ್ನು ಕೆಲ ಸಂಘ-ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳು ಹಾಕುತ್ತಿದ್ದರು ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಫ್ಲೆಕ್ಸ್, ಬ್ಯಾನರ್ ಹಾವಳಿಯಿಂದ ಎದುರಿನಿಂದ ಬಂದ ವಾಹನಗಳು ಕಾಣದೆ ಹಲವು ಅಪಘಾತಗಳು ನಡೆದಿದೆ. ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ.
ಪಟ್ಟಣದಲ್ಲಿ ಅಕ್ರಮವಾಗಿ ಕಟ್ಟಿರುವ ಬ್ಯಾನರ್ ಮತ್ತು ಫ್ಲೆಕ್ಸ್ ಗಳನ್ನು ತೆರವುಗೊಳಿಸುವಂತೆ ತಮಗೆ ಬಂದ ದೂರನ್ನು ಸಿಪಿಐ ಕೆ.ವಿ.ರಾಜಶೇಖರ್ ಪಪಂ ಅಧಿಕಾರಿಗಳಿಗೆ ಕಳಿಸಿಕೊಟ್ಟಿದ್ದರು. ಆದರೂ ಅಧಿಕಾರಿಗಳು ತೆರವುಗೊಳಿಸಿರಲಿಲ್ಲ. ಮಂಗಳವಾರ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅಕ್ರಮವಾಗಿ ಹಾಕಿರುವ ಬ್ಯಾನರ್ ಮತ್ತು ಫ್ಲೆಕ್ಸ್ ಗಳನ್ನು ತೆರವುಗೊಳಿಸುವಂತೆ ಪಪಂ ಅಧಿಕಾರಿಗಳಿಗೆ ಸೂಚಿಸಿದ್ದರು. ಡಿಸಿ ಆದೇಶದ ಹಿನ್ನಲೆಯಲ್ಲಿ ಬುಧವಾರ ಪಟ್ಟಣದಲ್ಲಿ ಅಕ್ರಮವಾಗಿ ಕಟ್ಟಿದ್ದ ಎಲ್ಲ ಪ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಾರೆ.
ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸ್ಥಳೀಯ ಸಂಸ್ಥೆಯಿಂದ ಗುರುತಿಸಿದ ಜಾಗದಲ್ಲಿ ಅನುಮತಿ ಪಡೆದು ಮಾತ್ರ ಫ್ಲೆಕ್ಸ್, ಬ್ಯಾನರ್ ಕಟ್ಟಬೇಕು. ಅನುಮತಿ ಪಡೆಯದೆ ಕಟ್ಟಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಆದರೆ ಅಧಿಕಾರಿಗಳು ಮಾತ್ರ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಕಟ್ಟಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇವುಗಳನ್ನು ತೆರವುಗೊಳಿಸಿದರೆ ಸಾಲದು ಅಕ್ರಮವಾಗಿ ಕಟ್ಟಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.