ಕಡೂರಿನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ 21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಧರ್ಮ ಸಾಮರಸ್ಯ ಸಾಹಿತ್ಯದೃಷ್ಟಿ ಗೋಷ್ಠಿಯಲ್ಲಿ ವಾಗ್ಮಿ ಚಟ್ನಳ್ಳಿ ಮಹೇಶ್ ಮಾತನಾಡಿದರು. ಎಂ.ಜಯಮ್ಮ, ಗರ್‌ಬೇಗ್ ಮತ್ತಿತರರಿದ್ದರು. 
ಚಿಕ್ಕಮಗಳೂರು

ಧರ್ಮಮಾರ್ಗ ವಿಸ್ತಾರವಾದರೆ ಸಾಮರಸ್ಯ ವೃದ್ಧಿ

 ಕಡೂರು: ಎಲ್ಲರೂ ಒಂದಾಗಿ ಬಾಳುವುದೇ ನಿಜವಾದ ಧರ್ಮ. ಧರ್ಮಮಾರ್ಗಗಳು ವಿಸ್ತಾರವಾದರೆ ಸಾಮರಸ್ಯ ವೃದ್ಧಿಯಾಗುತ್ತದೆ ಎಂದು ವಾಗ್ಮಿ ಚಟ್ನಳ್ಳಿ ಮಹೇಶ್ ಹೇಳಿದರು.
ಧರ್ಮ ಸಾಮರಸ್ಯ ಸಾಹಿತ್ಯದೃಷ್ಟಿ ಗೋಷ್ಠಿಯಲ್ಲಿ ಸಾಹಿತ್ಯದ ಕಣ್ಣಲ್ಲಿ ಧರ್ಮದ ಸ್ವರೂಪ ಕುರಿತು ಮಾತನಾಡಿ, ದೇವರು ಮತ್ತು ಧರ್ಮಗಳ ನಡುವಿನ ಸಮೀಕರಣ ಅಚ್ಚರಿಯ ಅಂಶವಾಗಿದೆ. ಸಾಮಾನ್ಯ ಜ್ಞಾನದ ಕೊರತೆಯಿಂದಾಗಿ ಮತ್ತು ಸಹಬಾಳ್ವೆಯ ಅರಿವಿನ ವೈಲ್ಯದಿಂದಾಗಿ ಸಂಸಾರಗಳಲ್ಲಿ ಬಿರುಕು ಮೂಡಲು ಕಾರಣವಾಗಿದೆ. ಮತ್ತೊಬ್ಬರನ್ನು ತುಳಿದು ಬದುಕುವುದು ಅಧರ್ಮ, ಸತ್ಯಹೇಳುವುದು, ಧರ್ಮದಂತೆ ನಡೆಯಬೇಕಿದೆ ಎಂದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ತರೀಕೆರೆ ಸಾಹಿತಿ ಭಗವಾನ್ ಮಾತನಾಡಿ, ಮನುಷ್ಯನ ಮನಸ್ಸನ್ನು ಬೆಸೆಯುವಂತದ್ದು ಧರ್ಮ. ಈ ಹಿಂದೆ ಐದು ಸಾವಿರ ವರ್ಷಗಳ ಹಿಂದೆ ಸನಾತನ ಧರ್ಮವಿತ್ತು. ಆಗ ಎಲ್ಲವೂ ಸಮಾನತೆಯಿಂದಿತ್ತು. ಅಂಥ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಮನುಷ್ಯರಾಗಬಹುದು. ಸಮ್ಮೇಳನಗಳಲ್ಲಿ ಇಂಥ ಗೋಷ್ಠಿಗಳನ್ನು ಆಯೋಜಿಸಿ ಎಲ್ಲರಿಗೂ ಅರಿವಾಗುವಂತೆ ಪಸರಿಸುವ ಅವಶ್ಯಕತೆ ಇದೆ ಎಂದರು.
 ಚಿಕ್ಕಮಗಳೂರು ನಿವೃತ್ತ ಪ್ರಾಚಾರ್ಯ ಗರ್‌ಬೇಗ್ ಮಾತನಾಡಿ, ಎಲ್ಲ ಧರ್ಮಗಳು ಸಾಮರಸ್ಯ ಮತ್ತು ಮಾನವೀಯತೆ ಸಾರಿವೆ. ವಿವಿಧ ಭಾಷೆ, ಕಲೆ, ಸಂಸ್ಕೃತಿ ಹೀಗೆ ವಿವಿಧೆತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ಭಾರತ ವಿಶ್ವಕ್ಕೆ ಮಾದರಿಯಾಗಿದೆ.  ಮಾನವೀಯ ಮೌಲ್ಯಗಳನ್ನು ಬಿತ್ತುವ ಮಹೋನ್ನತ ಕಾಯಕದಲ್ಲಿ ಧರ್ಮ ಗುರುಗಳು, ಧರ್ಮ ಗ್ರಂಥಗಳು, ಮಹತ್ವದ ಪಾತ್ರ ವಹಿಸಿವೆ ಎಂದರು.
ಸಮ್ಮೇಳನಾಧ್ಯಕ್ಷೆ ಎಂ.ಜಯಮ್ಮ, ತಾಪಂ ಮಾಜಿ ಅಧ್ಯಕ್ಷ ಬಿ.ಟಿ.ಗಂಗಾಧರ್‌ನಾಯ್ಕ, ಪುರಸಭಾ ಮಾಜಿ ಉಪಾಧ್ಯಕ್ಷ ಎಂ.ಸೋಮಶೇಖರ್, ಮಾಜಿ ಸದಸ್ಯ ಮರುಗುದ್ದಿ ಮನು, ಕಾಂತರಾಜು ಮತ್ತಿತರರಿದ್ದರು.