ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ 
ಚಿಕ್ಕಮಗಳೂರು

ಸಂವಿಧಾನ ಉಳಿಯಬೇಕಾದರೆ ಅದರ ಆಶಯಗಳನ್ನು ರಕ್ಷಿಸಬೇಕು

ಪ್ರಮುಖ ಮುಖ್ಯಾಂಶಗಳು

  • ತುರ್ತು ಪರಿಸ್ಥಿತಿ ಹೇರಲಾದ ಜೂನ್ ೨೫ ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿನ ಕರಾಳ ದಿನ
  • ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಬೇಕೆನ್ನುವವರು ಈ ದಿನವನ್ನು ಎಂದಿಗೂ ಮರೆಯಬಾರದು
ಚಿಕ್ಕಮಗಳೂರು: ತುರ್ತು ಪರಿಸ್ಥಿತಿ ಹೇರಲಾದ ಜೂನ್ ೨೫ ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿನ ಕರಾಳ ದಿನವಾಗಿದ್ದು, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಬೇಕೆನ್ನುವವರು ಈ ದಿನವನ್ನು ಎಂದಿಗೂ ಮರೆಯಬಾರದು ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೫೧ ವರ್ಷಗಳ ಹಿಂದೆ ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವದ ಕತ್ತು ಹಿಸುಕಲಾಯಿತು. ಸಂವಿಧಾನದ ಮೂಲಭೂತ ಹಕ್ಕುಗಳನ್ನು ದಮನಿಸಲಾಯಿತು ಹಾಗೂ ಪತ್ರಿಕಾ ಸ್ವಾತಂತ್ರ‍್ಯವನ್ನು ಹರಣ ಮಾಡಲಾಯಿತು ಎಂದು ಹೇಳಿದರು.
ಈ ಕರಾಳ ದಿನವನ್ನು ನೆನಪಿಸಿಕೊಳ್ಳುವುದರ ಉದ್ದೇಶ ಇತಿಹಾಸವನ್ನು ಸ್ಮರಿಸುವುದಷ್ಟೇ ಅಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಮುಂದಿನ ಪೀಳಿಗೆಗೂ ಉಳಿಸುವುದಾಗಿದೆ. ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರ ಒಂದೇ ವೇಳೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಎಲ್ಲಿ ಪ್ರಜಾಪ್ರಭುತ್ವ ಇರುತ್ತದೆಯೋ ಅಲ್ಲಿ ಸರ್ವಾಧಿಕಾರಕ್ಕೆ ಅವಕಾಶ ಇರುವುದಿಲ್ಲ. ಪ್ರಜಾಪ್ರಭುತ್ವ ಇಲ್ಲದ ಕಡೆಗಳಲ್ಲಿ ಮಾತ್ರ ಸರ್ವಾಧಿಕಾರ ಮೆರೆಯುತ್ತದೆ ಎಂದರು.
ಸಂವಿಧಾನ ಉಳಿಸಬೇಕು ಎಂದು ಹೇಳುವವರು ಕೇವಲ ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದರೆ ಸಾಕಾಗುವುದಿಲ್ಲ. ಸಂವಿಧಾನದ ಆಶಯಗಳು, ಮೌಲ್ಯಗಳು ಹಾಗೂ ಮೂಲಭೂತ ಹಕ್ಕುಗಳನ್ನು ಉಳಿಸಿ ಬೆಳೆಸಿದಾಗ ಮಾತ್ರ ಸಂವಿಧಾನ ಉಳಿಯುತ್ತದೆ. ಪ್ರಜಾಪ್ರಭುತ್ವದ ಬಗ್ಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಉಲ್ಲೇಖಿಸಿದ ಅವರು, ನಾಯಕತ್ವವು ಜನರ ಮಧ್ಯದಿಂದ ಬೆಳೆಯಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜನಪರ ಹೋರಾಟ ಮತ್ತು ಜನಪರ ಕಾರ್ಯಗಳ ಮೂಲಕ ನಾಯಕರು ರೂಪುಗೊಳ್ಳಬೇಕು. ವಂಶಪಾರಂಪರ್ಯ ನಾಯಕತ್ವವು ರಾಜಪ್ರಭುತ್ವದ ಲಕ್ಷಣವಾಗಿದ್ದು, ಅದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಎಲ್ಲ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಬೇಕೆಂದು ಬಯಸುವುದಾದರೆ, ತಮ್ಮ ಪಕ್ಷಗಳೊಳಗೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಪೂರಕವಾದ ವಾತಾವರಣ ನಿರ್ಮಿಸಬೇಕು. ಸಂವಿಧಾನದ ಮೂಲ ಆಶಯಗಳು, ಮೂಲಭೂತ ಹಕ್ಕುಗಳು ಹಾಗೂ ಪತ್ರಿಕಾ ಸ್ವಾತಂತ್ರ‍್ಯವನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ತುರ್ತು ಪರಿಸ್ಥಿತಿಯ ಕರಾಳ ನೆನಪು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುವ ಎಚ್ಚರಿಕೆಯಾಗಿ ಉಳಿಯಬೇಕು ಹೇಳಿದರು.