ಕೊಪ್ಪದಲ್ಲಿ ಆಯೋಜಿಸಿದ್ದ ಮಲೆನಾಡ ರೈತರ ಬದುಕಿನ ವಾಸ್ತವ ಚಿತ್ರಣ ವಿಚಾರ ಸಂಕಿರಣದಲ್ಲಿ ಮಲೆನಾಡ ರೈತರ ಬದುಕಿನ ವಾಸ್ತವ ಚಿತ್ರಣ ಕಿರು ಹೊತ್ತಿಗೆ ಬಿಡುಗಡೆಗೊಳಿಸಲಾಯಿತು.
ಕೊಪ್ಪ: ಮಲೆನಾಡಿನ ಸಮಸ್ಯೆಗಳನ್ನು ಬಗೆಹರಿಸುವುದು ಸುಲಭದ ಮಾತಲ್ಲ. ಶಾಸಕರು, ಅಧಿಕಾರಿಗಳನ್ನು ನಂಬಿಕೊಂಡು ಕುಳಿತರೇ ಮಲೆನಾಡಿಗರಿಗೆ ಉಳಿಗಾಲವಿಲ್ಲ ಎಂದು ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅಮ್ಮ ೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಮಲೆನಾಡ ರೈತರ ಬದುಕಿನ ವಾಸ್ತವ ಚಿತ್ರಣ ವಿಚಾರ ಸಂಕಿರಣದಲ್ಲಿ ಮಾತನಾಡಿ, ಈಗ ಕೇವಲ ಅಧಿಕಾರಿಗಳ ಮಾತನ್ನು ಕೇಳುವ ಶಾಸಕರಿದ್ದಾರೆ. ಅಧಿಕಾರಿಗಳನ್ನು ನಂಬಿದರೆ ಸಾಧ್ಯವಿಲ್ಲ, ರಸ್ತೆ ತಡೆ ನಡೆಸಬೇಕು, ಜೀವ ಪಣಕ್ಕಿಟ್ಟು ಹೋರಾಟ ಮಾಡಬೇಕು ಅಂತಹ ಚಳವಳಿ ನಡೆದರೆ ಮಾತ್ರ ಉಳಿಗಾಲವಿದೆ. ಎಂದು ಮಲೆನಾಡಿನ ರಾಜಕಾರಣಿಗಳಿಗೆ ಸಂವೇದನೆ, ಸೂಕ್ಷ್ಮತೆ ಇಲ್ಲ, ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇಲ್ಲ, ಅವರಿಗೆ ನಾವು ಕೇವಲ ಓಟು ಮಾತ್ರ ಎಂದು ದೂರಿದರು.
ಕಾಗೋಡು ತಿಮ್ಮಪ್ಪನಂತಹ ಜನಪ್ರತಿನಿಧಿಗಳು ಕಾನೂನು ಮಾಡುವುದು ನಾನು, ಇದನ್ನು ಮಾಡು ಎಂದು ಅಧಿಕಾರಿಗಳಿಗೆ ಹೇಳುತ್ತಿದ್ದರು ಈಗ ಅಂತಹ ಜನಪ್ರತಿನಿಧಿಗಳು ಇಲ್ಲ. ಮಲೆನಾಡಿನಲ್ಲಿ ಬದ್ಧತೆ ಇರುವ ರಾಜಕಾರಣಿ ಇಲ್ಲ, ಚಳವಳಿ ಮಾಡಲು ಇಲ್ಲಿನವರಿಗೆ ಬರುವುದಿಲ್ಲ. ರೈತರ ಪರವಾಗಿ ನಾವು ಸುಪ್ರೀಂಕೋರ್ಟ್ ಮೊರೆ ಹೋಗುವುದು ಅವಶ್ಯ ಎಂದರು.
ಎಸ್‌ಐಟಿ ಬಂದಿರುವುದು 90ರ ದಶಕದ ನಂತರ ಮಂಜೂರಾದ ಜಾಗ ರದ್ದುಪಡಿಸಿ, ಒತ್ತುವರಿದಾರರಿಂದ ದಂಡ ವಸೂಲಿ ಮಾಡಿ ಅರಣ್ಯ ಅಭಿವೃದ್ಧಿ ಮಾಡುವುದಾಗಿದೆ. ಅಮ್ಮ ೌಂಡೇಷನ್ ಸಂಸ್ಥಾಪಕ ಸುಧಾಕರ್ ಶೆಟ್ಟಿ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮೂಲಕ ಮಲೆನಾಡಿನ ಜನರಿಗೆ ಎದುರಾಗಿರುವ ಸಮಸ್ಯೆನಿವಾರಿಸಲು ಮುಂದಾದರೆ ನಾವು ಜತೆಯಲ್ಲಿ ಸಹಕಾರ ನೀಡುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಚ್.ಎಸ್.ಕಳಸಪ್ಪ ಗೌಡ ಮಾತನಾಡಿ, ಸುಧಾಕರ್ ಶೆಟ್ಟಿ ಅವರು ಪ್ರಸ್ತುತ ಗಂಭೀರ ಸಮಸ್ಯೆಗಳ ನಿವಾರಣೆಗೆ ಕಾರ್ಯಪ್ರವೃತ್ತರಾಗಿದ್ದಾರೆ. ಕೃಷಿಕರು ಏನು ಮಾಡುವುದು ಎಂದು ದಿಕ್ಕು ತೋಚದಂತಾಗಿದ್ದರೆ. ಕಾಡು ಪ್ರಾಣಿಗಳಿಂದ ಕೃಷಿ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಕೇವಲ ಸಮಸ್ಯೆಗಳ ಬಗ್ಗೆ ಚರ್ಚೆಯಾಗದೆ ಪರಿಹಾರದ ಕಡೆಗೂ ಗಮನ ಹರಿಸಬೇಕು ಎಂದರು.
ಅಮ್ಮ ೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ರೈತ ಮುಖಂಡರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಮಲೆನಾಡ ರೈತರ ಬದುಕಿನ ವಾಸ್ತವ ಚಿತ್ರಣ ಕಿರು ಹೊತ್ತಿಗೆ ಬಿಡುಗಡೆಗೊಳಿಸಲಾಯಿತು. ರೈತ ಮುಖಂಡ ಚಂದ್ರಶೇಖರ್ ರೈ, ಮ್ಯಾಮ್ಕೋಸ್ ಮಾಜಿ ಉಪಾಧ್ಯಕ್ಷ ಯಡಗೆರೆ ಸುಬ್ರಹ್ಮಣ್ಯ, ಮಲೆನಾಡು ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲವಾನೆ ಪ್ರಕಾಶ್ ಇದ್ದರು.