ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಪೌರ್ಣಿಮೆ ಸಮಾರಂಭದಲ್ಲಿ ಹಾಸನ ನಗರ ಸೇರಿದಂತೆ ವಿವಿಧ ಪ್ರಾಂತಗಳಿಂದ ಆಗಮಿಸಿದ ವೀರಶೈವ ಸಮಾಜ ಬಾಂಧವರು ಶ್ರೀ ಜಗದ್ಗುರುಗಳಿಗೆ ಗೌರವ ಸಮರ್ಪಿಸಿದರು. 
ಚಿಕ್ಕಮಗಳೂರು

ಧರ್ಮ ಉಳಿದರೆ ಸಮಾಜದಲ್ಲಿ ಮೌಲ್ಯಗಳು ಉಳಿಯಲು ಸಾಧ್ಯ

ಬಾಳೆಹೊನ್ನೂರು: ಭಾರತ ಋಷಿಮುನಿಗಳ ತಪೋಭೂಮಿ. ನಮ್ಮ ಸಂಸ್ಕೃತಿ ಪೂರ್ವಜರು ನಮಗೆ ನೀಡಿದ ಅಮೂಲ್ಯ ಆಸ್ತಿ. ಅದನ್ನು ಕಾಪಾಡುವುದು ನಮ್ಮ ಕರ್ತವ್ಯ. ಧರ್ಮ ಉಳಿದರೆ ಸಮಾಜದಲ್ಲಿ ಮೌಲ್ಯಗಳು ಉಳಿಯಲು ಸಾಧ್ಯ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ರಂಭಾಪುರಿ ಪೀಠದಲ್ಲಿ ನಡೆದ ಪೌರ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಧರ್ಮದಿಂದ ಜ್ಞಾನ, ಸಂಸ್ಕೃತಿಯಿಂದ ಸಂಸ್ಕಾರ, ಸೇವೆಯಿಂದ ಸಂತೃಪ್ತಿ ಮತ್ತು ಏಕತೆಯಿಂದ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಧರ್ಮವೆಂದರೆ ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸುವ ಜೀವನಮೌಲ್ಯ. ಸತ್ಯ, ಅಹಿಂಸೆ, ಕರುಣೆ, ದಯೆ, ಕ್ಷಮೆ, ತ್ಯಾಗ, ಸೇವೆ ಮತ್ತು ಪ್ರಾಮಾಣಿಕತೆ ಧರ್ಮದ ಪ್ರಮುಖ ಅಂಶಗಳು. ದೇವರ ಮುಂದೆ ದೀಪ ಹಚ್ಚುವುದರ ಜತೆಗೆ ಮತ್ತೊಬ್ಬರ ಜೀವನದಲ್ಲಿ ಜ್ಞಾನದ ಬೆಳಕು ಹಚ್ಚುವ ಪ್ರಯತ್ನ ಮಾಡಬೇಕು ಎಂದು ಸಿದ್ಧಾಂತ ಶಿಖಾಮಣಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಎಂದರು.

ಧರ್ಮವೆಂದರೆ ದ್ವೇಷವಲ್ಲ. ಧರ್ಮವೆಂದರೆ ಆಚರಣೆ. ಸಂಸ್ಕೃತಿ ಎಂದರೆ ಕೇವಲ ಸಂಪ್ರದಾಯವಲ್ಲ. ಅದು ನಮ್ಮ ಬದುಕಿನ ಮೌಲ್ಯ. ಭಕ್ತಿ ಎಂದರೆ ಕೇವಲ ಕೈ ಮುಗಿಯುವುದಲ್ಲ. ಸಂಕಷ್ಟದಲ್ಲಿರುವವರ ಕೈಹಿಡಿದು ನೆರವಾಗುವುದು. ಇತರರ ಧರ್ಮ ಮತ್ತು ನಂಬಿಕೆಗಳನ್ನು ಅಪಮಾನಿಸದೆ ನಮ್ಮ ಧರ್ಮದ ಶ್ರೇಷ್ಠ ಮೌಲ್ಯಗಳನ್ನು ನಮ್ಮ ನಡೆ-ನುಡಿಗಳ ಮೂಲಕ ಜಗತ್ತಿಗೆ ತೋರಿಸಬೇಕಿದೆ. ಯುವ ಜನರಲ್ಲಿ ಧಾರ್ಮಿಕ ಅರಿವು, ಮಕ್ಕಳ ಮನದಲ್ಲಿ ಸಂಸ್ಕಾರ, ಕುಟುಂಬದಲ್ಲಿ ಪ್ರೀತಿ, ಸಮಾಜದಲ್ಲಿ ಸಾಮರಸ್ಯ ಮತ್ತು ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವ ಬೆಳೆದುಕೊಂಡು ಬರಬೇಕು. ಧರ್ಮದ ಹೆಸರಿನಲ್ಲಿ ವಿಭಜನೆಯಾಗದೆ ಧರ್ಮದ ಮೌಲ್ಯಗಳು ಉಳಿದು ಬೆಳೆದು ಬರುವಂತಾಗಬೇಕು ಎಂದರು.

ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯರು, ಕಾರ್ಜುವಳ್ಳಿ ಮಠದ ಸದಾಶಿವ ಶಿವಾಚಾರ್ಯರು, ಕರ್ಪುರವಳ್ಳಿ ಮಠದ ಶ್ರೀ ಅಭಿನವ ಚಂದ್ರಶೇಖರ ಶಿವಾಚಾರ್ಯರು, ತಾವರೆಕೆರೆ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಹುಡುಗಿ ಸೋಮೇಶ್ವರ ಶಿವಾಚಾರ್ಯರು ಪಾಲ್ಗೊಂಡಿದ್ದರು. ಹರಪನಹಳ್ಳಿ ಕೊಟ್ರೇಶಪ್ಪ, ಆವರಗೊಳ್ಳ ಷಣ್ಮುಖಯ್ಯ ವೀರಯ್ಯ ಮಠದ, ಮಹೇಶ ಸಾಲಿಮಠ ಮತ್ತು ಹಾಸನ ನಗರದಿಂದ ಆಗಮಿಸಿದ ವೀರಶೈವ ಸಮಾಜದವರು ಶ್ರೀ ಜಗದ್ಗುರುಗಳಿಗೆ ಗೌರವ ಸಮರ್ಪಿಸಿದರು.