ಶೃಂಗೇರಿ ಕನ್ನಡಭವನದಲ್ಲಿ ಆಯೋಜಿಸಲಾದ ಜನಜಾಗೃತಿ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಜಿ.ಎಸ್.ರಂಜಿತ್ ಮಾತನಾಡಿದರು. ಹರೀಶ್ ವಿ. ಶೆಟ್ಟಿ, ಅಂಗುರ್ಡಿ ದಿನೇಶ್, ಸುಚ್ಚೀಂದ್ರ, ಆದರ್ಶ್ ಕಾಂಚೀನಗರ ಇತರರಿದ್ದರು. 
ಚಿಕ್ಕಮಗಳೂರು

ಕೃಷಿ ಅಳಿದರೆ ಎಲ್ಲವೂ ನಾಶ

ಜಿ. ಗಜೇಂದ್ರ
ಶೃಂಗೇರಿ: ಮಲೆನಾಡು ಎಂದರೆ ಬರೀ ಊರಲ್ಲ. ಜೀವವೈವಿಧ್ಯದ ಸಾನ್ನಿಧ್ಯ. ಇಲ್ಲಿ ರೈತ, ಶ್ರಮಿಕ, ವರ್ತಕ ಮತ್ತು ಚಾಲಕ ಎಲ್ಲರ ಜೀವನಚಕ್ರ ಕೃಷಿ ಅಭಿವೃದ್ಧಿಗೆ ಪೂರಕ. ಕೃಷಿ ಅಳಿದರೆ ಎಲ್ಲವೂ ನಾಶವಾಗುತ್ತದೆ ಎಂದು ಶೃಂಗೇರಿ ಕ್ಷೇತ್ರ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಎಸ್.ರಂಜಿತ್ ತಿಳಿಸಿದರು.
ಕನ್ನಡ ಭವನದಲ್ಲಿ ಸಮಿತಿಯಿಂದ ಭಾನುವಾರ ಆಯೋಜಿಸಲಾದ ಜನಜಾಗೃತಿ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನಾವಿಂದು ಆತಂಕದ ನಡುವೆ ಬದುಕುತ್ತಿದ್ದೇವೆ. ಹಲವಾರು ಕಾನೂನುಗಳು ಜನಸಾಮಾನ್ಯರ ಹಾಗೂ ರೈತರ ಬದುಕನ್ನು ಕಸಿದುಕೊಂಡಿವೆ. ಭದ್ರಾ ಹಿನ್ನೀರಿಗೆ, ತುಂಗಾ ತಿರುವಿಗೆ ತಲೆತಲಾಂತರದ ಭೂಮಿಯನ್ನು ರೈತರು ಬಿಟ್ಟುಕೊಟ್ಟಿದ್ದಾರೆ. ಒಂದು ಕಡೆ ಅರಣ್ಯ ಇಲಾಖೆ ರೂಪಿಸಿರುವ ಕಾನೂನುಗಳು, ಮತ್ತೊಂದೆಡೆ ಕಾಡಾನೆಗಳ ಹಿಂಡು, ಕಾಡುಕೋಣ, ಚಿರತೆ ಮುಂತಾದ ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು ಏಳು ಜನರು ಆನೆಯ ದಾಂಧಲೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅಡಕೆ ಹಳದಿ ಎಲೆರೋಗ, ಎಲೆಚುಕ್ಕೆ ರೋಗದ ಜತೆಗೆ ಇತರ ಬೆಳೆಗಳ ಹಾನಿಗಳು ಕೃಷಿಕರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ ನೀಡಲೂ ಸಾಧ್ಯವಾಗುತ್ತಿಲ್ಲ. ಕೆರೆಕಟ್ಟೆ ಭಾಗದಲ್ಲಿ ಪುರ್ನವಸತಿ ಯೋಜನೆಯ ಸಂತ್ರಸ್ತರಿಗೆ ತೊಂದರೆ ಆಗಿದೆ. ಕೃಷಿಯಿಂದ ಬದುಕು ನಿರ್ವಹಣೆ ಕಷ್ಟವಾಗುತ್ತಿದ್ದು ಯುವಪೀಳಿಗೆ ನಗರದತ್ತ ಮುಖಮಾಡಿದೆ. ಶೋಷಣೆಯ ವಿರುದ್ಧ ನಾವು ಧ್ವನಿ ಎತ್ತಬೇಕು. ಹೀಗಾಗಿ ಸಮಿತಿಯಿಂದ ಶೃಂಗೇರಿ ಕ್ಷೇತ್ರದ ಪ್ರತಿ ಗ್ರಾಪಂ ವ್ಯಾಪ್ತಿಗೂ ಜನಜಾಗೃತಿ ಯಾತ್ರೆ ತೆರಳಿದೆ ಎಂದರು.
ಸಾಹಿತಿ ಕಲ್ಕುಳಿ ವಿಠ್ಠಲ ಹೆಗಡೆ, ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ, ಕೃಷಿಕರಾದ ಆಗುಂಬೆ ಗಣೇಶ್ ಹೆಗಡೆ, ಗೋಳ್ಗೋಡು ನಾಗೇಶ್, ಭರತ್‌ರಾಜ್ ಕೆರೆಮನೆ, ಅನಿರುದ್ಧ್ ಉಪಸ್ಥಿತರಿದ್ದರು.