ತರೀಕೆರೆ ಎಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ಎನ್.ವಿ.ನಟೇಶ್, ವಿನಾಯಕ್ ಸಾಗರ್, ಎಚ್.ಜೆ.ರಶ್ಮಿ, ಎಂ.ಕೆ.ವಿಜಯಕುಮಾರ್, ನಟರಾಜ್ ಇತರರಿದ್ದರು.
- ಶೀಘ್ರ ಸರ್ಕಾರಿ ಜಾಗ ಗುರುತಿಸಿ
- ಹಂಚಿಕೆಗಾಗಿ ಕಾಯ್ದಿರಿಸಲು
ತರೀಕೆರೆ: ಸರ್ಕಾರದ ಉದ್ದೇಶದಂತೆ ಕ್ಷೇತ್ರದಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 5 ಸಾವಿರ ನಿವೇಶನ ವಿತರಿಸುವ ಯೋಜನೆ ರೂಪಿಸಲಾಗುತ್ತಿದ್ದು, ಅದಕ್ಕಾಗಿ ಶೀಘ್ರ ಸರ್ಕಾರಿ ಜಾಗ ಗುರುತಿಸಿ ಕಾಯ್ದಿರಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ತರೀಕೆರೆ ಹಾಗೂ ಅಜ್ಜಂಪುರ ನಿವೇಶನರಹಿತರಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಪುರಸಭೆ ಮತ್ತು ಪಪಂ ವ್ಯಾಪ್ತಿಯಷ್ಟೇ ಅಲ್ಲ, ಆಸುಪಾಸಿನ ಗ್ರಾಮಗಳಲ್ಲಿ ಲಭ್ಯವಿರುವ ಸರ್ಕಾರಿ ಜಾಗಗಳನ್ನು ಗುರುತಿಸಿ ಹಂಚಿಕೆಗಾಗಿ ಕಾಯ್ದಿರಿಸಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಹಿಂದೆ ಲಿಂಗದಹಳ್ಳಿ ಹೋಬಳಿ ವ್ಯಾಪ್ತಿಯ ಸಹ್ಯಾದ್ರಿಪುರ, ಕಲ್ಲಾಳು, ಮಂಚೇತವರು, ಕಲ್ಲತ್ತಿಪುರ, ಸೇರಿ ವಿವಿಧ ಭಾಗಗಳಲ್ಲಿ ನಿವೇಶನ ಹಂಚಿಕೆ ಮಾಡಲಾಗಿದ್ದು, ಸದ್ಯ ಅಲ್ಲಿ ಬಾಕಿ ಉಳಿದಿರುವ ಸಮಸ್ಯೆ ಬಗೆಹರಿಸಿ ಅರ್ಹ ಫಲಾನುಭವಿಗಳ ಹೆಸರಿಗೆ ಖಾತೆ ದಾಖಲಿಸುವ ಮೂಲಕ ಇ-ಸ್ವತ್ತು ವಿತರಿಸಲು ಬೇಕಾದ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಪಟ್ಟಣದ ಕೊಳೆಗೇರಿ ನಿವಾಸಿಗಳಿಗೆ ವಸತಿ ಸಮುಚ್ಚಯ ಮಾದರಿಯಲ್ಲಿ ಮನೆ ನಿರ್ಮಿಸಲು ಅಗತ್ಯವಿರುವ ಜಾಗವನ್ನು ಇಲಾಖೆ ಅಧಿಕಾರಿಗಳು ಗುರುತಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ನಿವೇಶನರಹಿತರಿಗೆ ನಿವೇಶನ ಒದಗಿಸುವುದು ಸರ್ಕಾರದ ಮೂಲ ಉದ್ದೇಶವಾಗಿದ್ದು, ಅರ್ಹ ಫಲಾನುಭವಿಗಳಿಗೆ ಯಾವುದೇ ಸಮಸ್ಯೆ, ಹಂಚಿಕೆ ಪ್ರಕ್ರಿಯೆಯಲ್ಲಿ ವಿಳಂಬ ಧೋರಣೆ ಅನುಸರಿಸದಂತೆ ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಎಸಿ ಎನ್.ವಿ.ನಟೇಶ್, ತಹಸೀಲ್ದಾರರಾದ ವಿನಾಯಕ್ ಸಾಗರ್, ಎಚ್.ಜೆ.ರಶ್ಮಿ, ತಾಪಂ ಇಒ ಎಂ.ಕೆ.ವಿಜಯಕುಮಾರ್, ಉಪ ತಹಸೀಲ್ದಾರ್ ನಟರಾಜ್ ಮತ್ತಿತರರಿದ್ದರು.