ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ
ಚಿಕ್ಕಮಗಳೂರು: ೪೬ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಕೊಪ್ಪಳದಲ್ಲಿ ಬೃಹತ್ ರೈತ ಸಮಾವೇಶವನ್ನು ಜು.೨೧ ರಂದು ಮಂಗಳವಾರ ಬೆಳಗ್ಗೆ ೧೧ಕ್ಕೆ ಬಲ್ಡೋಟಾ ಕಂಪನಿ ಗೇಟ್ ಎದುರು ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ನರಗುಂದ, ನವಲಗುಂದ ರೈತ ಬಂಡಾಯ ನಡೆದು ೪೬ ವರ್ಷಗಳು ತುಂಬುತ್ತಿರುವ ಈ ಚಾರಿತ್ರಿಕ ಹಿನ್ನೆಲೆಯಲ್ಲಿ ರೂಪುಗೊಂಡ ರೈತ ಚಳುವಳಿ ರಾಜ್ಯದಲ್ಲೇ ಹಲವಾರು ಐತಿಹಾಸಿಕ ಹೋರಾಟಗಳನ್ನು ನಡೆಸಿ ದೇಶವ್ಯಾಪಿ ವಿಸ್ತರಿಸಿ ಗಡಿಯನ್ನು ದಾಟಿ ಪ್ರಪಂಚದ ನಾನಾ ದೇಶಗಳಲ್ಲಿ ತನ್ನ ಛಾಪು ಮೂಡಿಸಿದೆ ಎಂದರು.
ಕೇಂದ್ರ ಸರ್ಕಾರದ ಹೊಸ ಆರ್ಥಿಕ ನೀತಿ, ಉದಾರೀಕರಣ, ಮುಕ್ತ ಮಾರುಕಟ್ಟೆ ನೀತಿಗಳು ರೈತಕುಲದ ಅಸ್ತಿತ್ವಕ್ಕೆ ಗಂಡಾಂತರ ತಂದಿದೆ. ದೇಶದ ೧೪೦ ಕೋಟಿ ಜನರಿಗೆ ಆಹಾರ ಭದ್ರತೆಯನ್ನು ಒದಗಿಸುವ ಕೃಷಿ ಕ್ಷೇತ್ರವನ್ನು ಎಲ್ಲಾ ಸಂಕಷ್ಟಗಳಿಂದ ಕೊನೆಗಾಣಿಸಿ ರೈತ ಸಮುದಾಯವನ್ನು ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಮನವಿ ಮಾಡಿದರು.
ಕೊಪ್ಪಳದ ಭಾಗ್ಯ ನಗರದಲ್ಲಿ ೧.೫ ಲಕ್ಷ ಜನರ ಜೀವನಕ್ಕೆ ಕಂಠಕವಾಗಿರುವ ಬಲ್ಡೋಟಾ ಕಾರ್ಖಾನೆಯನ್ನು ಸಾರಾ ಸಗಟಾಗಿ ವಿರೋಧಿಸಿ ಕಳೆದ ಫೆಬ್ರವರಿ ೨೫ ರಿಂದ ೨೨ ಹಳ್ಳಿಗಳ ಜನರು ನಿರಂತರ ಹೋರಾಟ ಮಾಡುತ್ತಿದ್ದು, ಕೊಪ್ಪಳ ಜಿಲ್ಲೆ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಸಮಿತಿ ನಿರಂತರವಾಗಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಎರಡು ಬಾರಿ ಕೊಪ್ಪಳ ಬಂದ್ ಮಾಡಲಾಗಿದೆ. ಬೆಂಗಳೂರಿನ ಫ್ರೀಡಂಪಾರ್ಕ್‌ಗೆ ಬಂದು ಹೋರಾಟ ನಡೆಸಿ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಸತ್ಯಾಗ್ರಹ ನಡೆಸಲಾಗಿದೆ ಎಂದು ವಿವರಿಸಿದರು.
ಈ ಹೋರಾಟದ ಫಲವಾಗಿ ೨ ಕಾರ್ಖಾನೆಗಳನ್ನು ಪರಿಸರ ಇಲಾಖೆ ಮುಚ್ಚಿಸಿದೆ. ಇನ್ನೂ ೩ ಕಾರ್ಖಾನೆಗಳಿಗೆ ಮುಚ್ಚುವವ ನೋಟೀಸ್ ನೀಡಲಾಗಿದೆ. ೧೪ ಮಾಲಿನ್ಯ ಮಾಡುತ್ತಿರುವ ಕಾರ್ಖಾನೆಗಳ ಮೇಲಸ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದ ಅವರು ಮುಂಗಾರು ಮಳೆಯ ವೈಫಲ್ಯದಿಂದಾಗಿ ರಾಜ್ಯ ತೀವ್ರ ಬರಗಾಲ ಎದುರಿಸುತ್ತಿದ್ದು, ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು.
ಕಾಡಂಚಿನ ಗ್ರಾಮಗಳ ಜನರ ಜೀವನಕ್ಕೆ ಕಂಠಕವಾಗಿರುವ ಕಾಡು ಪ್ರಾಣಿಗಳ ಹಾವಳಿ ತಡೆಗೆ ಹಾಗೂ ಬೆಳೆಹಾನಿ ತಪ್ಪಿಸುವಂತೆ ರೈತ ಸಂಘ ಹೋರಾಟ ಮಾಡುತ್ತಿದ್ದು, ಕೂಡಲೇ ಸರ್ಕಾರ ಆನೆ ಹಾವಳಿ ತಡೆಗೆ ರೈಲ್ವೇ ಬ್ಯಾರಿಕೇಡ್, ಟಿಂಟ್‌ಕಲ್ ಬೇಲಿ ನಿರ್ಮಾಣ ಮಾಡಬೇಕು. ಹಾನಿಯಾಗಿರುವ ಬೆಳೆಗಳಿಗೆ ಸೂಕ್ತ ವೈಜ್ಞಾನಿಕ ಪರಿಹಾರ ನೀಡಬೇಕು. ಕಾಡು ಪ್ರಾಣಿಗಳಿಂದ ಮೃತಪಟ್ಟವರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಜನಸಾಮಾನ್ಯರ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಕಾಂಗ್ರೆಸ್, ಬಿಜೆಪಿ, ಜನತಾದಳ ಈ ಮೂರು ಪಕ್ಷಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘ ಪರ್ಯಾಯ ಪಕ್ಷ ಕಟ್ಟಲು ಹಾಗೂ ನೆಲ, ಜಲ, ಭಾಷೆಗಳ ಉಳಿವಿಗಾಗಿ ರಾಜ್ಯದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಮತ್ತು ರಾಜ್ಯದ ಸರ್ವತೋಮುಖ ಅಭಿವೃದ್ದಿಯ ಚಿಂತನೆಯೊಂದಿಗೆ ಹೊಸ ಪರ್ಯಾಯ ಪಕ್ಷವನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ರೈತ ಚಳುವಳಿ, ದಲಿತ ಚಳುವಳಿ, ಪ್ರಗತಿಪರ ಚಳುವಳಿಗಳು ಸಂಯುಕ್ತ ರಂಗ ಸೇರಿದಂತೆ ಸರ್ವೋದಯ ಕರ್ನಾಟಕ ಪಕ್ಷ ಸ್ಥಾಪಿಸಲು ಮುಂದಾಗಿದೆ ಎಂದರು.
ಮುಂದಿನ ಜಿಲ್ಲಾ ಪಂಚಾಯಿತಿ ಚುನಾವಣೆಯೂ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಸರ್ವೋದಯ ಪಕ್ಷ ಸ್ಫರ್ದೆ ಮಾಡಲಿದ್ದು, ಸರ್ವರೂ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದ ಅವರು, ಪಕ್ಷ ಸಂಘಟನೆಗೆ ಇಂದೂದರ ಹೊನ್ನಾಪುರ, ಹುಲಿಕೆರೆ ಮಹದೇವ, ಗುರುಪ್ರಸಾದ್ ಕೆರಗೋಡು, ಮುನಿಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ, ಚಾಮರಸ ಮುಂತಾದವರು ನೇತೃತ್ವ ವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಹಿರಿಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ ಮಾಜಿ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಮಂಜುನಾಥ್, ಉಪಸ್ಥಿತರಿದ್ದರು.