ಚಿಕ್ಕಮಗಳೂರು ಜಿಲ್ಲಾ‌ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಪಿ.ಮಂಜೇಗೌಡ ಅವರನ್ನು ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು. ಹಿರೇಗೌಜ ಶಿವಕುಮಾರ್, ದೇವರಾಜ್, ಎಸ್.ಬಿದರೆ ಶರತ್ ಮತ್ತಿತರರಿದ್ದರು. 
ಚಿಕ್ಕಮಗಳೂರು

ಕಾಫಿನಾಡು ಕಾಂಗ್ರೆಸ್‌ಗೆ ಎಚ್.ಪಿ.ಮಂಜೇಗೌಡ ಸಾರಥಿ

ನಿತ್ಯಾನಂದ ಎಸ್.ಎನ್.

ಪ್ರಮುಖ ಮುಖ್ಯಾಂಶಗಳು

  • ತಳಮಟ್ಟದಿಂದ ಬಂದು ಜಿಲ್ಲಾಧ್ಯಕ್ಷನಾದ ನಾಯಕ
ಚಿಕ್ಕಮಗಳೂರು: ಮಾಜಿ ಪ್ರಧಾನಿ ಇಂದಿರಾಗಾAಧಿಯವರಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ಕಾಫಿನಾಡು ಚಿಕ್ಕಮಗಳೂರಿನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಆಯ್ಕೆಯಾಗಿದ್ದಾರೆ.
ರಾಜ್ಯದಲ್ಲಿ ಈ ವರ್ಷದ ಅಂತ್ಯದೊಳಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು ಕಾಂಗ್ರೆಸ್‌ಗೆ ಪ್ರಮುಖ ಸವಾಲಾಗಿದೆ.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ, ಪಕ್ಷದ ಪರ ಇರುವ ರಾಜಕೀಯ ವಾತಾವರಣವನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮುಂದುವರಿಸುವುದು ಕಾಂಗ್ರೆಸ್‌ನ ಮುಂದಿರುವ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಮುಂದಿನ ಚುನಾವಣೆಯ ದೃಷ್ಟಿಯಿಂದ ಮಹತ್ವ ಪಡೆದಿದೆ.
ಎಐಸಿಸಿ ಮಾಜಿ ಕಾರ್ಯದರ್ಶಿ ಮೋಹಂತಿ ಅವರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಸಮರ್ಥ ಅಭ್ಯರ್ಥಿಯ ಆಯ್ಕೆಗಾಗಿ ಸರ್ವೆ ನಡೆಸಲಾಗಿತ್ತು. ಮೂರು ಮಂದಿ ಮಹಿಳೆಯರು ಸೇರಿದಂತೆ ಒಟ್ಟು ೨೧ ಮಂದಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು.
ಆರಂಭದಲ್ಲಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ, ಕೆಪಿಸಿಸಿ ವಕ್ತಾರ ಕೊಪ್ಪದ ಸುಧೀರ್ ಕುಮಾರ್ ಮುರೋಳಿ, ಜಿಲ್ಲಾ ವಕ್ತಾರ ಎಂ.ಎಸ್.ಅನAತ್ ಹಾಗೂ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ನಯಾಜ್ ಅಹಮದ್ ಸೇರಿದಂತೆ ಹಲವರ ಹೆಸರುಗಳು ಮುಂಚೂಣಿಯಲ್ಲಿದ್ದವು.
ಅAತಿಮ ಹಂತದಲ್ಲಿ ಎಂ.ಸಿ. ಶಿವಾನಂದಸ್ವಾಮಿ, ಸುಧೀರ್ ಕುಮಾರ್ ಮುರೋಳಿ, ಎಚ್.ಪಿ.ಮಂಜೇಗೌಡ ಹಾಗೂ ಗಾಯತ್ರಿ ಶಾಂತೇಗೌಡ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿದ್ದವು. ಈ ಪೈಕಿ ಪಕ್ಷದ ತಳಮಟ್ಟದ ಸಂಘಟನೆಯಲ್ಲಿ ದೀರ್ಘಕಾಲದಿಂದ ಸಕ್ರಿಯರಾಗಿರುವ ಎಚ್.ಪಿ.ಮಂಜೇಗೌಡ ಅವರಿಗೆ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ಒಲಿದಿದೆ.
ಎಚ್.ಪಿ. ಮಂಜೇಗೌಡ ಅವರ ರಾಜಕೀಯ ಪಯಣ ಪಕ್ಷದ ತಳಮಟ್ಟದ ಸಂಘಟನೆಯಿAದ ಆರಂಭವಾಗಿದೆ. ೧೯೯೪ರಿಂದ ೨೦೦೪ರವರೆಗೆ ಹಂಪಾಪುರ ಬೂತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವರು, ಬಳಿಕ ೨೦೦೭ರಿಂದ ೨೦೧೦ರವರೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
೨೦೧೧ರಿಂದ ೨೦೧೬ರವರೆಗೆ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ ಮಂಜೇಗೌಡ, ೨೦೧೭ರಿಂದ ೨೦೨೬ರವರೆಗೆ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಪಕ್ಷದ ಸಂಘಟನಾ ಚಟುವಟಿಕೆಗಳ ಜತೆಗೆ ಸ್ಥಳೀಯ ಸಂಸ್ಥೆಗಳಲ್ಲೂ ಅನುಭವ ಹೊಂದಿರುವ ಅವರು, ನಾಲ್ಕು ಬಾರಿ ಬೀಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದು, ಒಂದು ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಬೂತ್ ಮಟ್ಟದ ಕಾರ್ಯಕರ್ತನಾಗಿ ರಾಜಕೀಯ ಪಯಣ ಆರಂಭಿಸಿ, ಯುವ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಸಂಘಟನೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಜಿಲ್ಲಾಧ್ಯಕ್ಷ ಸ್ಥಾನದವರೆಗೆ ಬಂದಿರುವ ಮಂಜೇಗೌಡ ಅವರ ಆಯ್ಕೆ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೂ ರಾಜಕೀಯ ಅವಕಾಶದ ಸಂದೇಶ ನೀಡಿದೆ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗಿದೆ.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಮಂಜೇಗೌಡ ಅವರ ಸಂಘಟನಾ ಅನುಭವ ಹಾಗೂ ತಳಮಟ್ಟದ ಕಾರ್ಯಕರ್ತರೊಂದಿಗಿನ ಸಂಪರ್ಕ ಕಾಂಗ್ರೆಸ್‌ಗೆ ಬಲ ನೀಡುವ ನಿರೀಕ್ಷೆ ಇದೆ. ಐದು ವಿಧಾನಸಭಾ ಕ್ಷೇತ್ರಗಳ ಗೆಲುವಿನ ಉತ್ಸಾಹವನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮುಂದುವರಿಸುವ ಜವಾಬ್ದಾರಿ ಇದೀಗ ನೂತನ ಜಿಲ್ಲಾಧ್ಯಕ್ಷರ ಮೇಲಿದೆ.
ತಳಮಟ್ಟದ ಸಂಘಟನೆ, ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಹಾಗೂ ಸ್ಥಳೀಯ ಸಂಸ್ಥೆಗಳ ಅನುಭವ ಹೊಂದಿರುವ ಮಂಜೇಗೌಡ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿರುವುದು ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡ ಕಾಂಗ್ರೆಸ್‌ನ ಸಂಘಟನಾ ತಂತ್ರದ ಭಾಗವೇ ಎಂಬ ಚರ್ಚೆಯೂ ಕಾಫಿನಾಡಿನ ರಾಜಕೀಯ ವಲಯದಲ್ಲಿ ಆರಂಭವಾಗಿದೆ.