ಬಾಳೆಹೊನ್ನೂರಿನ ಪೇಟೆಕೆರೆ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಗುದ್ದಲಿ ಪೂಜೆ ನೆರವೇರಿಸಿದರು.  
ಚಿಕ್ಕಮಗಳೂರು

ಭದ್ರಾನದಿ ಸೇತುವೆ ಪಕ್ಕದ ಮನೆಗಳು ಶೀಘ್ರ ಸ್ಥಳಾಂತರ

ಬಾಳೆಹೊನ್ನೂರು: ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಗುಣಮಟ್ಟದಲ್ಲಿ ಲೋಪವಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪೇಟೆಕೆರೆ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಬಾಳೆಹೊನ್ನೂರು ಭದ್ರಾನದಿ ಸೇತುವೆ ಕಾಮಗಾರಿ ವಿಳಂಬದ ಬಗ್ಗೆ ಹಲವಾರು ಬಾರಿ ಗುತ್ತಿಗೆದಾರರೊಂದಿಗೆ ಮಾತನಾಡಲಾಗಿದೆ. ಸೇತುವೆ ಪೂರ್ಣಗೊಳಿಸಲು ಭದ್ರಾನದಿ ಸೇತುವೆ ಪಕ್ಕದಲ್ಲಿರುವ ಮನೆಗಳನ್ನು ತೆರವುಗೊಳಿಸಬೇಕಿದೆ. ಅಲ್ಲಿರುವ ಕುಟುಂಬಗಳ ಸ್ಥಳಾಂತರಕ್ಕೆ ಈಗಾಗಲೇ ಕ್ರಮಕೈಗೊಂಡಿದ್ದು, ಅಕ್ಷರನಗರದ ಬಳಿಯಲ್ಲಿ ಜಾಗ ಗುರುತಿಸಲಾಗಿದೆ. ಶೀಘ್ರದಲ್ಲಿ ಅವರಿಗೆ ಹಕ್ಕುಪತ್ರ ನೀಡಿ ಸ್ಥಳಾಂತರ ಮಾಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿರುವಲ್ಲಿ ಜಿಪಂ, ತಾಪಂ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನ ಪಡೆದು ಅಭಿವೃದ್ಧಿಗೊಳಿಸಲಾಗುವುದು. ಗ್ರಾಮೀಣ ಭಾಗದಲ್ಲಿಯೂ ಗುಂಡಿ ಮುಚ್ಚುವ ಕೆಲಸ, ಜಂಗಲ್ ಕ್ಲಿಯರ್ ಮುಂತಾದವನ್ನು ಆದ್ಯತೆ ಮೇರೆಗೆ ನಡೆಸಲಾಗುವುದು. ವಿಶೇಷ ಅಧಿವೇಶನದ ಸಂದರ್ಭದಲ್ಲಿ ಕಂದಾಯ, ಲೋಕೋಪಯೋಗಿ ಸಚಿವರನ್ನು ಭೇಟಿ ನೀಡಿ ಇಲ್ಲಿನ ರಸ್ತೆ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಅಭಿವೃದ್ಧಿಗೆ ಅನುದಾನಕ್ಕೆ ಮನವಿ ಮಾಡಲಾಗುವುದು ಎಂದರು.
ಹಲವು ಕಡೆಗಳಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಯಲ್ಲಿ ಗುಣಮಟ್ಟವಿಲ್ಲ ಎಂಬ ದೂರು ಬಂದಿದ್ದು, ಈ ಬಗ್ಗೆ ಜಿಪಂ ಸಿಇಒಗೆ ತಿಳಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಎನ್.ಆರ್.ಪುರ, ಕೊಪ್ಪ ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾತಿ ಹಂತದಲ್ಲಿದ್ದು, ಶೀಘ್ರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಸದಸ್ಯರಾದ ಎಂ.ಎಸ್.ಅರುಣೇಶ್, ಅಂಬುಜಾ, ಬಿ.ಕೆ.ಮಧುಸೂದನ್, ಸಂತೋಷ್‌ಕುಮಾರ್, ಶಿವಪ್ಪ, ಶೇಖರ್, ಫಿಲೋಮಿನಾ, ಜಾನಕಿ ಪ್ರಮುಖರಾದ ಜಿ.ಎಂ.ನಟರಾಜ್, ಎಂ.ಎಸ್.ಜಯಪ್ರಕಾಶ್, ಜಾನ್ ಡಿಸೋಜಾ, ಚಂದ್ರಮ್ಮ, ಅರುಣ್‌ಕುಮಾರ್, ಕೌಶಿಕ್ ಪಟೇಲ್, ಕಾಫಿ ಗಿರೀಶ್ ಮತ್ತಿತರರು ಹಾಜರಿದ್ದರು.