ಮೂಡಿಗೆರೆ ತಾಲೂಕು ಬಡವನದಿಣ್ಣೆ ಗ್ರಾಮದಲ್ಲಿ ಜಾನಕಿ ಎಂಬುವವರ ಮನೆ ಮೇಲೆ ಮರ ಬಿದ್ದು ಛಾವಣಿಗೆ ಹಾನಿಯಾಗಿರುವುದು. 
ಚಿಕ್ಕಮಗಳೂರು

ಗಾಳಿ-ಮಳೆಗೆ ಮನೆ ಕುಸಿತ, ಮಹಿಳೆ ಪಾರು

ಮೂಡಿಗೆರೆ: ತಾಲೂಕಿನಾದ್ಯಂತ ಗಾಳಿಯೊಂದಿಗೆ ನಿರಂತರವಾಗಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಅಲ್ಲಲ್ಲಿ ಮರ ಬಿದ್ದು ಹಾನಿ ಸಂಭವಿಸಿದೆ. ಬಡವನದಿಣ್ಣೆ ಗ್ರಾಮದ ಜಾನಕಿ ಎಂಬುವರ ಮನೆ ಮೇಲೆ ಭಾನುವಾರ ರಾತ್ರಿ ಮರ ಬಿದ್ದು ಮನೆ ಜಖಂಗೊಂಡಿದೆ.
ಜಾನಕಿ ಅವರೊಬ್ಬರೇ ಮನೆಯಲ್ಲಿದ್ದರು. ಮರ ಬೀಳುವ ಶಬ್ದ ಕೇಳಿದೊಡನೆ ಮನೆಯಿಂದ ಹೊರಗೆ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಮನೆ ಛಾವಣಿ ಭಾಗಶಃ ಹಾನಿಯಾಗಿದ್ದು ಮನೆಯಲ್ಲಿದ್ದ ವಸ್ತುಗಳು ಧ್ವಂಸಗೊಂಡಿವೆೆ. ಜಾನಕಿ ಅವರಿಗೆ ವಾಸಿಸಲು ಮನೆಯಿಲ್ಲದೆ ಕಂಗಾಲಾಗಿದ್ದಾರೆ. ಭಾನುವಾರ ರಾತ್ರಿ ಧಾರಾಕಾರ ಮಳೆಗೆ ತುಮಕೂರು-ಮಂಗಳೂರು ಮತ್ತು ಮೂಡಿಗೆರೆ-ಕಡೂರು ಹೆದ್ದಾರಿ ಜಲಾವೃತವಾಗಿತ್ತು. ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಹೆದ್ದಾರಿ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿಯುವ ಕಾರಣ ಹೆದ್ದಾರಿ ಜಲಾವೃತವಾಗಲು ಕಾರಣವಾಗಿದೆ. ವಿದ್ಯುತ್ ಕಂಬದ ಮೇಲೆ ಅಲ್ಲಲ್ಲಿ ಮರ ಬಿದ್ದು ಗ್ರಾಮೀಣ ಭಾಗದಲ್ಲಿ ಶನಿವಾರದಿಂದ ವಿದ್ಯುತ್ ಕಡಿತಗೊಂಡಿದೆ. ಪಟ್ಟಣದಲ್ಲಿ ವಿದ್ಯುತ್ ಆಗಾಗ ಕೈಕೊಡುತ್ತಿದೆ. ವಿಪರೀತ ಗಾಳಿಯೊಂದಿಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಂಪೂರ್ಣ ಅಸ್ತವ್ಯಸ್ತವಾಗಿದೆ.